ಕೋಲಾರ : ಕುಟುಂಬ ಕಲಹ ಹಿನ್ನೆಲೆ ಮನನೊಂದ ರಾಕ್ಷಸ ತಾಯಿಯೊಬ್ಬಳು ತಾನೇ ಹೆತ್ತ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಹೃದಯ ವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ. ಪರಿಣಾಮ 8 ವರ್ಷದ ಪುತ್ರಿ ಸ್ಥಳದಲ್ಲೇ ನರಳಾಡಿ ಪ್ರಾಣ ಬಿಟ್ಟರೆ, ಮತ್ತೊಬ್ಬ ಮಗಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ. ಜ್ಯೋತಿ ಈ ಕೃತ್ಯವೆಸೆಗಿದ ರಾಕ್ಷಸ ತಾಯಿ ಎಂದು ತಿಳಿದು ಬಂದಿದೆ. ಸದ್ಯ ತಾಯಿಯ ವಿಶ್ವಾಸಘಾತಕ ಕೆಲಸಕ್ಕೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಆಂಧ್ರಪ್ರದೇಶದ ಪಲಮನೇರು ಬಳಿಯ ಬೂಸಾನಿ ಕುರುಬಪಲ್ಲಿ ನಿವಾಸಿ ಜ್ಯೋತಿ ಇದೇ ಗ್ರಾಮದ ತಿರುಮಲೇಶ ಎಂಬಾತನನ್ನ ಮನೆಯವರ ವಿರೋಧದ ನಡುವೆ 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಕೆಲವು ದಿನಗಳ ಕಾಲ ಚೆನ್ನಾಗಿದ್ದ ದಂಪತಿ ಆ ಬಳಿಕ ಜಗಳ ಮಾಡಲಾಂಭಿಸಿದ್ದರು. ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದ ಜ್ಯೋತಿ, ಕಷ್ಟದ ಜೀವನದ ಜೊತೆಗೆ ಸಂಸಾರ ನಡೆಸುತ್ತಿದ್ದಳು. ಈ ಜಂಜಾಟದಿಂದ ಬೇಸತ್ತು ನಿನ್ನೆ ಮಕ್ಕಳೊಂದಿಗೆ ಮನೆಯಿಂದ ಹೊರ ಬಂದಿರುವ ಜ್ಯೋತಿ, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
10 ಲೀಟರ್ ಪೆಟ್ರೋಲ್ ತೆಗೆದುಕೊಂಡು ಬಂದಿದ್ದ ಆಕೆ ರಾತ್ರಿಯಿಡಿ ಬೆಟ್ಟದ ತಪ್ಪಲಿನ ಬಂಡೆಯ ಮೇಲೆ ಮಲಗಿದ್ದಳು. ನಿದ್ರೆಯಲ್ಲಿದ್ದ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದ ಜ್ಯೋತಿ, ಬಳಿಕ ಬೆಂಕಿ ಹಚ್ಚಿದ್ದಾಳೆ. ಪರಿಣಾಮ 8 ವರ್ಷದ ಅಕ್ಷಯ ನಿದ್ರೆ ಮಾಡುತ್ತಿದ್ದಂತೆ ಸ್ಥಳದಲ್ಲೇ ನರಳಾಡಿ ಪ್ರಾಣ ಬಿಟ್ಟರೆ, 6 ವರ್ಷದ ಉದಯಶ್ರೀ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಉದಯಶ್ರೀಯನ್ನು ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಕ್ಕಳಿಗೆ ಪೆಟ್ರೋಲ್ ಸುರಿದು ಕೊಲೆ ಮಾಡುವ ನಿರ್ಧಾರ: ಇನ್ನು ಚಿಕ್ಕ ವಯಸ್ಸಿಗೆ ಪ್ರೀತಿಸಿ ಮದುವೆಯಾಗಿರುವ ಜ್ಯೋತಿಗೆ ಗಂಡ ತಿರುಮಲೇಶನಿಂದ ನಿರಂತರ ಕಿರುಕುಳ ಇತ್ತು ಎನ್ನಲಾಗಿದೆ. ಪರಿಣಾಮ ನಾನು ಸತ್ರೆ ಮಕ್ಕಳ ಪರಿಸ್ಥಿತಿ ಏನು? ಎಂದು ಆಲೋಚಿಸಿ ಇಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಕೊಲೆ ಮಾಡುವ ನಿರ್ಧಾರ ಮಾಡಿದ್ದಳಂತೆ. ಆದ್ರೆ ಮಕ್ಕಳ ನರಳಾಟ ನೋಡಿದ ತಾಯಿ, ಗಾಬರಿಗೊಂಡು ಅಲ್ಲೆ ನರಳಾಡುತ್ತಿದ್ದ ಮಗಳೊಂದಿಗೆ ಬೆಟ್ಟದಲ್ಲಿ ಕಾಲ ಕಳೆದಿದ್ದಾಳೆ.
ಮುಳಬಾಗಿಲು ನಗರ ಪೊಲೀಸರು ಸ್ಥಳಕ್ಕೆ ಭೇಟಿ: ಇಂದು ಮುಂಜಾನೆ ಪಳ್ಳಿಗರ ಪಾಳ್ಯದ ಸಾರ್ವಜನಿಕರು ಅಂಜನಾದ್ರಿ ಬೆಟ್ಟಕ್ಕೆ ವಾಯು ವಿಹಾರಕ್ಕೆ ತೆರಳಿದ ವೇಳೆ ಕೃತ್ಯ ಬಯಲಾಗಿದೆ. ಅಲ್ಲದೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಮುಳಬಾಗಿಲು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಗಾಯಗೊಂಡು ನರಳಾಡುತ್ತಿದ್ದ ಉದಯಶ್ರೀಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇನ್ನೂ ಪಿಎಸ್‌ಐ ಮಂಜುನಾಥ್ ಮಗುವನ್ನ ಹೊತ್ತು ಆಸ್ಪತ್ರೆಗೆ ಸಾಗುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪಿಎಸ್‌ಐ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಮುಳಬಾಗಿಲು ನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತಾಯಿ ಜ್ಯೋತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾಗಿ ನಾವಿಬ್ಬರು ನಮಗಿಬ್ಬರು ಎಂದು ಅನೋನ್ಯವಾಗಿರಬೇಕಿದ್ದ ದಂಪತಿಗಳ ಮಧ್ಯೆ ಇದ್ದ ಗಲಾಟೆ ಇಬ್ಬರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದಂತಾಗಿದೆ. ಆದ್ರೂ ಮಕ್ಕಳಿಗೆ ಬೆಂಕಿ ಇಟ್ಟ ರಾಕ್ಷಸ ತಾಯಿಯ ಈ ಕೃತ್ಯಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸೆ: ಕೇಂದ್ರ ಸಚಿವರ ಪುತ್ರ ಸೇರಿ 14 ಆರೋಪಿಗಳ ವಿರುದ್ಧ ದೋಷಾರೋಪಣೆ