ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಡುಗುರ್ಕಿ ಗ್ರಾಮದಲ್ಲಿ ಕೋತಿಗಳು ಆಹಾರ, ನೀರು ಸಿಗದೆ ಅನಾರೋಗ್ಯದಿಂದ ಬಳಲುತ್ತಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.
ರಾಜ್ಯಾದ್ಯಂತ ಜನರು ಕೊರೊನಾ ಮಹಾಮಾರಿಯಿಂದ ಆತಂಕಕ್ಕೀಡಾಗಿದ್ದಾರೆ. ಇದರ ನಡುವೆ ಬಂಗಾರಪೇಟೆ ತಾಲೂಕಿನ ಕೋಡುಗುರ್ಕಿ ಗ್ರಾಮದಲ್ಲಿ ಕಳೆದೊಂದು ವಾರದಿಂದ ಕೋತಿಗಳು ಆಹಾರ, ನೀರು ಸಿಗದೆ ನಿತ್ರಾಣಗೊಂಡಿವೆ. ಇದನ್ನು ಕಂಡಂತಹ ಗ್ರಾಮಸ್ಥರಲ್ಲಿ ಕೋತಿಗಳಿಗೆ ಕೊರೊನಾ ಸೋಂಕು ತಗುಲಿದೆಯಾ ಎಂಬ ಆತಂಕ ಮೂಡಿದೆ. ಈ ಆತಂಕದ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಗ್ರಾಮದಲ್ಲಿ ನೂರಾರು ಕೋತಿಗಳಿದ್ದು, ಅವುಗಳು ಕೆಮ್ಮುವುದು, ಎಲ್ಲೆಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುತ್ತಿವೆ. ಗ್ರಾಮಸ್ಥರು ಆಹಾರ ನೀಡಿದರೂ ಕೂಡಾ ಅದನ್ನು ತಿನ್ನುತ್ತಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿದ್ದು, ಈ ಕುರಿತಂತೆ ಗ್ರಾಮಸ್ಥರು, ಸ್ಥಳೀಯ ಪಂಚಾಯತ್ ಪಿಡಿಒ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಆರೋಗ್ಯ ಹಾಗೂ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶಿಲಿಸಿದ್ದು, ಭಯ ಪಡುವ ಅಗತ್ಯ ಇಲ್ಲ ಎಂದು ವಿಶ್ವಾಸ ತುಂಬಿದ್ದಾರೆ.