ಕೋಲಾರ: ಜೆಡಿಎಸ್ ವರಿಷ್ಠರಿಗೆ ನಾನು ಯಾವುದೇ ರೀತಿಯ ಹಣ ನೀಡಿ ಅಧಿಕಾರ ಪಡೆದುಕೊಂಡಿಲ್ಲ ಎಂದು ನೂತನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದ್ದಾರೆ.
ಇಂದು ಕೋಲಾರಕ್ಕೆ ಆಗಮಿಸಿ ನಗರದ ಗಾಂಧಿವನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ರೀತಿಯಲ್ಲಿ ವರಿಷ್ಠರಿಗೆ ಹಣ ನೀಡಿ ಅಧಿಕಾರ ಪಡೆದುಕೊಂಡಿಲ್ಲ. ನಾನು ಹಣ ಕೊಟ್ಟು ಪರಿಷತ್‌ಗೆ ಆಯ್ಕೆ ಆಗುವುದಕ್ಕೆ ನನ್ನ ಬಳಿ ಹಣವಿಲ್ಲ ಎಂದರು. ಅಲ್ಲದೆ ನಾನೊಬ್ಬ ಉದ್ಯಮಿ. ಲಾಕ್ಡೌನ್ನಿಂದಾಗಿ ನಷ್ಟ ಅನುಭವಿಸಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಆದ್ರೆ ರಾಜಕೀಯವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಅಷ್ಟೇ. ನಾನು ಜಿಲ್ಲೆಯಲ್ಲಿ ಮಾಡಿರುವಂತಹ ಸಮಾಜ ಸೇವೆ ಗುರುತಿಸಿ ಪಕ್ಷ ನನಗೆ ಅವಕಾಶ ಕೊಟ್ಟಿದೆ ಎಂದು ಹೇಳಿದ್ರು.
ನಾನು ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಪಕ್ಷವನ್ನು ಕಟ್ಟುತ್ತೇನೆಂಬ ನಂಬಿಕೆಯಿಂದ ಪಕ್ಷ ಹಾಗೂ ನಮ್ಮ ಶಾಸಕರು, ನಮ್ಮ ವರಿಷ್ಠರು ನನ್ನನ್ನ ಪರಿಷತ್‌ಗೆ ಆಯ್ಕೆ ಮಾಡಿದ್ದಾರೆ. ಅಲ್ಲದೆ ಕೋಲಾರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಭರವಸೆ ನೀಡಿದ್ರು.