ಕೋಲಾರ : ಏಹ್.. ಹೋಯ್.. ನಮ್ಮ ಎಂಎಲ್ಎ ಬಗ್ಗೆ ಮಾತಾಡ್ತಿಯಾ, ಆ ಯೋಜನೆ ತಂದಿದ್ದು ನಾನು, ಈ ಯೋಜನೆಯಲ್ಲಿ ನಿಮ್ಮದೇನು ಪಾತ್ರ ಇಲ್ಲ, ಸಭೆಗೆ ಆಹ್ವಾನವಿಲ್ಲದೇ ಸಭೆಗೆ ಬಂದಿದ್ದೀರಾ ಹೀಗೆ ಹಾಲಿ ಮತ್ತು ಮಾಜಿ ಶಾಸಕರುಗಳ ನಡುವೆ ವಾದ - ಪ್ರತಿವಾದ ನಡೆಯುತ್ತಿದ್ರೆ, ಅಲ್ಲೇ ಅವರ ಬೆಂಬಲಿಗರ ನಡುವೆ ಮಾರಾಮಾರಿ ಸಹ ನಡೆಯಿತು. ಅಂದ ಹಾಗೆ ಈ ಮಾರಾಮಾರಿ ದೃಶಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ.
ಹೌದು ಇವತ್ತು ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಟಿಎಪಿಸಿಎಂಎಸ್ ಆವರಣದಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಹಾಜರಿದ್ದ ಹಾಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಡುವೆ ಭಾಷಣ ಮಾಡುವ ವೇಳೆ ವೇದಿಕೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿಗೆ ಕಾರಣವಾಯ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಭೆಗೆ ಸಂಬಂಧ ಪಡದ ವಿಷಯಗಳನ್ನು ಮಾತನಾಡುತ್ತಾ ತಮ್ಮ ವೈಯಕ್ತಿಕ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ರು. ಅಲ್ಲದೇ, ಜಿಲ್ಲೆಯ ಕೆಸಿ ವ್ಯಾಲಿ ಯೋಜನೆಯಲ್ಲಿ ಇವರ ಪಾತ್ರ ಏನೂ ಇಲ್ಲ ಅದೆಲ್ಲ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಶ್ರಮ ಎಂದು ಕಾರ್ಯಕ್ರಮದ ವಿಷಯವನ್ನು ಬಿಟ್ಟು ಬೇರೆ ವಿಷಯವನ್ನು ಮಾತನಾಡಿದ್ದು ಗಲಾಟೆಗೆ ಕಾರಣವಾಯ್ತು.
ಒಟ್ಟಾರೆ ವರ್ಷಕ್ಕೊಮ್ಮೆ ನಡೆಯುವ ರೈತರ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸಭೆ ಇವತ್ತು ಇಬ್ಬರು ಹಾಲಿ ಮತ್ತು ಮಾಜಿ ಶಾಸಕರುಗಳ ಪ್ರತಿಷ್ಠೆ ಹಾಗೂ ಜಟಾಪಟಿಗೆ ಬಲಿಯಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.