ಕೋಲಾರ: ಪದೇ ಪದೆ ಅಬಕಾರಿ ಇಲಾಖೆ ವಿಚಾರವಾಗಿ ವಿವಾದಿತ ಹೇಳಿಕೆಗಳನ್ನ ನೀಡುವ ಮೂಲಕ ಪೇಚಿಗೆ ಸಿಲುಕಿಕೊಳ್ಳುವ ಅಬಕಾರಿ ಸಚಿವ ನಾಗೇಶ್ ಇಂದು ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ರೆ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಬೇಸರ ವ್ಯಕ್ತಪಡಿಸಿದ ಅವರು, ತಮ್ಮ ಇಲಾಖೆಯ ಪ್ರಶ್ನೆ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದ್ರು. ಈ ಹಿಂದೆ ಮನೆ ಮನೆಗೆ ಮದ್ಯಪಾನ ಹಾಗೂ ಇಲಾಖೆಯಿಂದ ಮದ್ಯಪಾನಕ್ಕೆ ಸಬ್ಸಿಡಿ ಕೊಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದ ನಾಗೇಶ್‌ಗೆ ಸಿಎಂ ಸೇರಿದಂತೆ ಸರ್ಕಾರದ ಸಚಿವರು ಕೂಡ ವಾರ್ನಿಂಗ್ ಕೊಟ್ಟಿದ್ರು. ಇಲಾಖೆ ಬಗ್ಗೆ ಮಾತನಾಡಿ ಎರಡು ಬಾರಿ ಪೇಚಾಟಕ್ಕೆ ಸಿಲುಕಿಕೊಂಡಿದ್ದ ಸಚಿವ ನಾಗೇಶ್, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೆ ಸ್ವಂತ ಇಲಾಖೆಯ ಬಗ್ಗೆ ಪ್ರತಿಕ್ರಿಯೆ ಕೊಡಲು ನಕಾರ ವ್ಯಕ್ತಪಡಿಸಿದ್ರು.
ಇನ್ನೂ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂಕ್ರಾಂತಿ ಹಬ್ಬ ಹಾಗೂ ಧನುರ್ಮಾಸ ಅಡ್ಡಿ ಬಂದಿದೆ. ಇನ್ನೂ ಮಂತ್ರಿ ಸ್ಥಾನ ಕೊಡುವ ಕುರಿತು ಚರ್ಚೆ ಆಗಿಲ್ಲ. ಅದೆಲ್ಲಾ ಸಿಎಂಗೆ ಬಿಟ್ಟ ಪರಮಾಧಿಕಾರ ಎಲ್ಲರನ್ನೂ ಮಂತ್ರಿ ಮಾಡ್ತಾರೆ ಎಂದು ಹೇಳಿದ್ರು ಎಂದ ಅವರು, ಮೋದಿ ಕೃಷಿ ಸಮ್ಮಾನ ಕಾರ್ಯಕ್ರಮ ತುಮಕೂರಲ್ಲಿ ಆಯೋಜನೆ ಮಾಡಿದ್ದು, ಉತ್ತಮ ಕೆಲಸ, ಕಾರ್ಯಕ್ರಮದಲ್ಲಿ ಸಾಕಷ್ಟು ಜನರಿಗೆ ಅವಾರ್ಡ್ ಗಳನ್ನ ನೀಡಿದ್ದಾರೆ ಎಂದರು.