ಕೋಲಾರ: ಅಹಿಂದ ಎಂದು ಹೋರಾಟ ಮಾಡಿದವರಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಮೀಸಲಾತಿ ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಹೆಸರು ಹೇಳದೇ, ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಟಾಂಗ್ ನೀಡಿದ್ರು.
ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೋಡೋ ಪಾದಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಭಯವಿಲ್ಲ. ಅವರು ಯಾವುದೇ ಪಾದಯಾತ್ರೆ ಮಾಡಿದರೂ ಬಿಜೆಪಿಗೆ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದರು.
ಅಲ್ಲದೆ, ಸರ್ಕಾರ ಬಹಳ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಇಪ್ಪತ್ತು ವರ್ಷಗಳಿಂದ ಮಾಡಲಾಗದ ಮೀಸಲಾತಿ ಹೆಚ್ಚಳವನ್ನ ಬಿಜೆಪಿ ಮಾಡಿದೆ ಎಂದರು. ಅಲ್ಲದೇ ಅಹಿಂದಾ ಎಂದು ಹೋರಾಟ ಮಾಡಿದವರು ಮೀಸಲಾತಿ ಹೆಚ್ಚಳ ಮಾಡಲಾಗಲಿಲ್ಲ, ಬಿಜೆಪಿ ಪಕ್ಷ ಮೀಸಲಾತಿ ಹೆಚ್ಚಿಗೆ ಮಾಡಬೇಕಾಯಿತು. ಇದನ್ನ ಕಾಂಗ್ರೆಸ್ ಪಕ್ಷ ಸ್ವಾಗತ ಮಾಡಬೇಕು, ಜೊತೆಗೆ ಸ್ವಾಗತ ಮಾಡುವ ದೊಡ್ಡ ಮನಸ್ಸಿರಬೇಕು ಎಂದು ಹೇಳಿದರು.
ಜಿಲ್ಲೆಯ ಹಲವೆಡೆ ರಸ್ತೆಗಳು ಬಹಳ ಹದಗೆಟ್ಟಿರುವ ಬಗ್ಗೆ ದೂರುಗಳು ಬಂದಿವೆ. ಇದರಲ್ಲಿ ಕಾಮಗಾರಿ ಲೋಪ ಸೇರಿದಂತೆ ಅಕ್ರಮ ಬಿಲ್ ಮಾಡಿರುವ ಕುರಿತು ಕೂಡ ಪರಿಶೀಲನೆ ಮಾಡಲಾಗುವುದು. ಅಲ್ಲದೆ, ಗುತ್ತಿಗೆದಾರರು ಬಾಕಿ ಹಣ ಪಾವತಿ ಮಾಡುವಂತೆ ಮನವಿ ಮಾಡಿದ್ದಾರೆ, ಮಾತಿನಂತೆ ಕೆಲಸ ಮಾಡಲು ಬಂದಿದ್ದೇನೆ, ಇದರಲ್ಲಿ ಹಿಂದೆ ಸರಿಯುವ ಮಾತಿಲ್ಲ ಎಂದರು.
ಗುತ್ತಿಗೆದಾರರು ಈಗಾಗಲೇ ಹೆಚ್ಚಳ ಮಾಡಿರುವ ವ್ಯಾಟ್ ಹಾಗೂ ಜಿಎಸ್ಟಿ ಸೇರಿದಂತೆ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಅದು ಬಿಟ್ಟು ಬೇರೆ ಯಾವುದೇ ರೀತಿಯ ಮನವಿ ನನ್ನ ಬಳಿ ಮಾಡಿಲ್ಲ. ಪೂರ್ಣ ಆಗಿರುವ ಕಾಮಗಾರಿ ಪರಿಶೀಲನೆ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.
ಅಲ್ಲದೆ ಸದ್ಯ ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲನೆ ನಡೆಸಲಾಗುವುದು. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಅರೋಪ ಯಾರು ಬೇಕಾದರೂ ಮಾಡಬಹುದು, ನ್ಯಾಯಾಲಯದಲ್ಲಿರುವ ಪ್ರಕರಣಗಳ ಕುರಿತು ಚರ್ಚೆ ಬೇಡ. ಕಾಮಗಾರಿ ಉದ್ಘಾಟನೆ, ಗುದ್ದಲಿ ಪೂಜೆ ಎಲ್ಲವನ್ನೂ ಐದು ದಿನಗಳಲ್ಲೇ ಮಾಡುವೆ. ಅರ್ಅರ್ ನಗರದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯಲಿ, ಅದರ ಬಗ್ಗೆ ನಮ್ಮದ್ಯಾವುದೇ ತಕರಾರಿಲ್ಲ, ಅಕ್ರಮ ನಡೆದಿದ್ದರೆ ಶಿಕ್ಷೆ ಆಗಲಿ ಎಂದು ಸವಾಲು ಹಾಕಿದರು.
ಓದಿ: ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ: ಕೆಪಿಸಿಸಿ ವಕ್ತಾರ ಲಕ್ಷಣ್