ಕೋಲಾರ : ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಅತಿರೇಕದಿಂದ ವರ್ತಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಿನ್ನೆ ಸಂಜೆ ಬಂಗಾರಪೇಟೆಯಿಂದ ಮಾಲೂರು ತಾಲೂಕಿನ ಟೇಕಲ್ ಬಳಿಗೆ ಕೆಂಪೇಗೌಡ ರಥ ಬಂದ ವೇಳೆ ಪೊಲೀಸರನ್ನು ತಳ್ಳಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಜೊತೆಗೆ ಕೆಂಪೇಗೌಡ ರಥ ಚಲಾಯಿಸುತ್ತಿದ್ದ ಚಾಲಕನ ಮೇಲೂ ಹಲ್ಲೆ ಮಾಡಿ ಕೆಳಗಿಳಿಸಿ ತಾನೇ ವಾಹನ ಚಲಾವಣೆ ಮಾಡಿದ್ದಾರೆ. ಇಷ್ಟೆಲ್ಲ ಘಟನೆ ಸಂಸದ ಮುನಿಸ್ವಾಮಿ ಎದುರೇ ನಡೆದಿದ್ದು, ಮುನಿಸ್ವಾಮಿ ಮಾತಿಗೂ ಕ್ಯಾರೇ ಎನ್ನದೆ ಮುನ್ನುಗ್ಗಿರುವ ಘಟನೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ನಿನ್ನೆ ಸಂಜೆ ಕೆಂಪೇಗೌಡ ರಥಯಾತ್ರೆ ಸ್ವಾಗತಿಸುವ ವೇಳೆ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ಬಣಗಳ ನಡುವೆ ಮಾರಾಮಾರಿ ನಡೆದು ತಳ್ಳಾಟ ನೂಕಾಟ ನಡೆದು ದೊಡ್ಡ ಹೈಡ್ರಾಮಾ ನಡೆದಿತ್ತು.
ಇನ್ನು ರಥಯಾತ್ರೆ ಬರುವ ಮುನ್ನವೇ ಮಾಜಿ ಶಾಸಕ ಮಂಜುನಾಥ್ ಗೌಡ ಕಳಶಗಳನ್ನು ವೇದಿಕೆ ಬಳಿ ಕರೆದೊಯ್ದ ಹಿನ್ನೆಲೆ, ಹೂಡಿ ವಿಜಯ್ ಕುಮಾರ್ ಮತ್ತು ಬೆಂಬಲಿಗರು ಕಳಶಗಳನ್ನು ರಥಯಾತ್ರೆ ಜೊತೆಗೆ ಕರೆತರಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ನುಗ್ಗಿ ಬರುವ ಮಂಜುನಾಥಗೌಡ ಪೊಲೀಸರನ್ನು ತಳ್ಳಿ, ಬಿಜೆಪಿ ಮುಖಂಡ ಗೋಪಾಲಗೌಡ ಮೇಲೆ ಹಲ್ಲೆ ಮಾಡಿ ಅತಿರೇಕದ ವರ್ತನೆ ತೋರಿದ್ದಾರೆ. ಅಲ್ಲದೇ ಮಂಜುನಾಥ್ ಗೌಡರ ಈ ದೌರ್ಜನ್ಯ ಸರಿಯಲ್ಲ ತಾಲೂಕಿನ ಹೊರಗಿನವರು ಇಲ್ಲಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ : ನಕಲಿ ಅಂಕಪಟ್ಟಿ ನೀಡಿ ಪದವಿಗೆ ದಾಖಲು: ಬೆಂಗಳೂರು ವಿವಿಯಲ್ಲಿ ಎಂಟು ವಿದ್ಯಾರ್ಥಿಗಳು ಪತ್ತೆ