ಕೋಲಾರ: ಅನುಮತಿ ಇಲ್ಲದ ಕಡೆ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿರುವುದಲ್ಲದೇ ಪೊಲೀಸ್ ವಾಹನಕ್ಕೆ ಅಡ್ಡಗಟ್ಟಿ ಪ್ರತಿಭಟನೆಗೆ ಮುಂದಾದ ಪಿಎಫ್ಐ ಕಾರ್ಯಕರ್ತರಿಗೆ ಮೇಲೆ ಕೋಲಾರದಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ನಗರದ ಕ್ಲಾಕ್ ಟವರ್ ಬಳಿ ಈ ಘಟನೆ ಜರುಗಿದ್ದು, ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ.
ಯುಪಿ ಪೊಲೀಸರು ಕೇರಳದ ಪಿಎಫ್ಐ ಕಾರ್ಯಕರ್ತನನ್ನ ಬಂಧಿಸಿರುವುದನ್ನ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದು, ತಹಶೀಲ್ದಾರ್ ಕಚೇರಿ ಎದುರು ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದರೆ, ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆಗೆ ಅನುಮತಿ ನೀಡಿದ ಸ್ಥಳದಲ್ಲಿ ಬಿಟ್ಟು ಬೇರೆಡೆ ಪ್ರತಿಭಟನೆ ಮಾಡಲು ಮುಂದಾದರು. ಜೊತೆಗೆ ನಗರದ ವಿವಿಧೆಡೆ ಪ್ರತಿಭಟನೆ ಮಾಡಿ ರಸ್ತೆ ತಡೆ ಮಾಡಿದರಲ್ಲದೆ, ಕ್ಲಾಕ್ ಟವರ್ ಬಳಿ ಪೊಲೀಸ್ ವಾಹನವನ್ನ ಅಡ್ಡಗಟ್ಟಲು ಮುಂದಾದ ವೇಳೆ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿ: ಶಾಸಕ ರವೀಂದ್ರ ಶ್ರೀಕಂಠಯ್ಯ
ಈ ವೇಳೆ ಪೊಲೀಸರ ಮೇಲೆ ದಾಳಿಗೆ ಕಾರ್ಯಕರ್ತರು ಮುಂದಾದಾಗ ನಗರ ಪೊಲೀಸರು ಕೈಗೆ ಲಾಠಿ ಹಿಡಿದರು. ಬಳಿಕ ಏಳು ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದರು.