ಕೋಲಾರ: ಕಳೆದೊಂದು ವಾರದಿಂದ ಕೋಲಾರದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಅತಿ ದೊಡ್ಡ ಕೆರೆಯಾಗಿರುವ ನಗರಕ್ಕೆ ನೀರನ್ನ ಪೂರೈಸುವ ಕೋಲಾರಮ್ಮನ ಕೆರೆ ಭರ್ತಿಯಾಗಿದೆ. ಹೀಗಾಗಿ ಜನರಲ್ಲಿ ಹರ್ಷ ತುಂಬಿದ್ದು, ಕೆರೆಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಈ ಬೃಹತ್ ಕೆರೆ, ಸುಮಾರು 789 ಎಕರೆ ವಿಸ್ತೀರ್ಣವಿದೆ. ಕಳೆದ ಇಪ್ಪತ್ತು ವರ್ಷಗಳ ನಂತರ ಮೊದಲ ಬಾರಿಗೆ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಜನತೆಯಲ್ಲಿ ಸಂತಸ ಮನೆ ಮಾಡಿದೆ. ಈ ಹಿಂದಿನ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿ ಅವರ ನೇತೃತ್ವದ ತಂಡ ಕೆರೆಯ ಒತ್ತುವರಿ ತೆರವು ನಡೆಸಲು ಹರಸಾಹಸ ಪಟ್ಟಿದ್ರು. ಇದಾದ ನಂತರ ಕಳೆದ ಎರಡು ವರ್ಷಗಳಿಂದ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಜಿಲ್ಲಾಡಳಿತ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿ, ಕೆರೆಯಲ್ಲಿರುವ ಹೂಳು ತೆಗೆಸಿ ಸ್ವಚ್ಛಗೊಳಿಸಿತ್ತು.
ಜಿಲ್ಲೆಗೆ ವರದಾನವಾಗಿರುವ ಕೆ.ಸಿ.ವ್ಯಾಲಿ ನೀರು ಇತ್ತೀಚೆಗೆ ಕೋಲಾರ ಕೆರೆಗೆ ಹರಿಯುತ್ತಿದ್ದು, ಇದರ ನಡುವೆ ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಬಿದ್ದಿದೆ. ಸಂತಸದಿಂದ ಜನರು ಕೋಡಿ ಹರಿಯುವ ಸ್ಥಳದಲ್ಲಿರುವ ದುಗ್ಗಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಹಲವಾರು ವರ್ಷಗಳ ನಂತರ ಕೋಡಿ ಹರಿಯುತ್ತಿರುವುದನ್ನ ನೋಡಲು ತಂಡೋಪ ತಂಡಗಳಾಗಿ ಜನರು ಆಗಮಿಸುತ್ತಿದ್ದು, ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮಳೆಗೆ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.