ಕೋಲಾರ : ಕಲ್ಲು ಕ್ವಾರಿಯಲ್ಲಿ ಸ್ಫೋಟದಿಂದ ಬಿಹಾರ ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವು ಸಿಕ್ಕಿವೆ. ಪ್ರಕರಣ ತಿರುಚಲು ಪ್ರಯತ್ನಿಸಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ಅಮಾನತಾಗಿದ್ದು, ಘಟನೆ ಮರೆಮಾಚಲು ಯತ್ನಿಸಿ ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪ ಹೊತ್ತವರು ತಲೆಮರೆಸಿಕೊಂಡಿದ್ದಾರೆ.
ಗುರುವಾರ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿ ಬಳಿಯ ಸಂಜೀವಿನಿ ಸ್ಟೋನ್ ಕ್ರಶರ್ಸ್ನ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್ ಸಂಭವಿಸಿದ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮತ್ತೊಬ್ಬ ಕಾರ್ಮಿಕನ ಎರಡೂ ಕೈಗಳು ಛಿದ್ರವಾಗಿವೆ. ಉಳಿದ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯನ್ನು ಪ್ರಭಾವಿಗಳು ಲಾರಿ ಅಪಘಾತದಿಂದ ಮೃತಪಟ್ಟಿರುವುದಾಗಿ ತಿರುಚುವ ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ರಾತ್ರೋರಾತ್ರಿ ಮರಣೋತ್ತರ ಪರೀಕ್ಷೆ ನಡದಿದ್ದು. ಶವ ಸಂಸ್ಕಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ಘಟನೆಯಲ್ಲಿ ಬಿಹಾರ ಮೂಲದ ರಾಕೇಶ್ ಸಾನಿ ಎಂಬಾತ ಮೃತಪಟ್ಟಿದ್ದರೆ, ಮೊಹಮದ್ ಆಜಾದ್ ಎಂಬಾತನಿಗೆ ಎರಡೂ ಕೈಗಳು ಛಿದ್ರವಾಗಿದೆ.
ಘಟನೆ ಏನು : ಗುರುವಾರ ಸಂಜೆ ಮಂಜುನಾಥ್ ಎಂಬುವರ ಕಲ್ಲುಕ್ವಾರಿಯಲ್ಲಿ ಬ್ಲಾಸ್ಟ್ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಐದು ಜನ ಕಾರ್ಮಿಕರು ಸುಮಾರು ಒಂಬತ್ತು ಕಡೆಗಳಲ್ಲಿ ಬ್ಲಾಸ್ಟ್ಗಾಗಿ ಅಮೋನಿಯಂ ತುಂಬಿಸಿ ಡಿಟರ್ನೆಟ್ ಕನೆಕ್ಟ್ ಮಾಡುತ್ತಿದ್ದರು ಈ ವೇಳೆ ಸಿಡಿಲು ಬಡಿದಿದೆ. ಈ ವೇಳೆ ಆಕಸ್ಮಿಕವಾಗಿ ಹುದುಗಿಸಿಟ್ಟಿದ್ದ ಅಮೋನಿಯಂ ಸ್ಫೋಟಗೊಂಡಿರುವ ಬಗ್ಗೆ ಎಸ್ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣವನ್ನು ತಿರುಚಲಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಬಂದು ಪರಿಶೀಲಿಸಿದ್ದಾರೆ. ಅಲ್ಲದೆ ಸ್ಥಳೀಯರ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಿಕ್ಕು ತಪ್ಪಿಸಿದ್ದ ಆರೋಪದ ಮೇಲೆ ಮಾಸ್ತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಅಪಘಾತ ಎಂದು ದಾಖಲಾಗಿದ್ದ ಎಫ್ಐಆರ್ನ್ನು ಬದಲಾಯಿಸಿ ಎಕ್ಸಪ್ಲೋಜಿವ್ ಆಕ್ಟ್ 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಡೀ ಪ್ರಕರಣದ ತನಿಖೆಯನ್ನು ಕೋಲಾರ ಡಿವೈಎಸ್ಪಿ ಮುರಳೀಧರ್ ಅವರಿಗೆ ವಹಿಸಲಾಗಿದೆ. ಸ್ಫೋಟಕ ಸರಬರಾಜು ಮಾಡಿದ ದೀಪೇನ್ ಎಂಬಾತನನ್ನು ಬಂಧಿಸಲಾಗಿದೆ. ಕ್ವಾರಿ ಮಾಲೀಕ ಮಂಜುನಾಥ್, ಡ್ರೈವರ್ ಹಾಗೂ ಸುಳ್ಳುದೂರು ಕೊಟ್ಟಿದ್ದ ಮೃತ ರಾಕೇಶ್ ಸಾನಿ ಅವರ ಸಹೋದರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಜೆಲ್ಲಿ ಕ್ರಷರ್ನಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು!