ಕೋಲಾರ : ಬೆಂಗಳೂರಿನಿಂದ-ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75 ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಕೂಡಿದೆ. ಹೀಗಾಗಿ ಇದು ಸಾವಿನ ರಸ್ತೆಯಾಗಿ ಮಾರ್ಪಾಡಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ನ್ನು 2005 ರಲ್ಲಿ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲು ನಿರ್ಧರಿಸಲಾಗಿತ್ತು. ಈ ಯೋಜನೆಯಡಿ 2005ರಲ್ಲಿ ಆರಂಭವಾಗಿದ್ದ ಕಾಮಗಾರಿ 2013/14 ರಲ್ಲಿ ಮುಕ್ತಾಯಗೊಂಡಿತ್ತು. ಸುಮಾರು 560 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೆದ್ದಾರಿ, ಬೆಂಗಳೂರಿನಿಂದ-ಚೆನ್ನೈಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ ಅಭಿವೃದ್ಧಿಯಾಯಿತು.
ಎಲ್ಲರೂ ಈ ಹೆದ್ದಾರಿಯಿಂದ ರಸ್ತೆ ಸಂಪರ್ಕ ಸುಧಾರಿಸಿತು ಎಂದೇ ಭಾವಿಸಿದ್ರು. ಆದ್ರೆ, ವಾಸ್ತವವಾಗಿ ನೋಡೋದಾದ್ರೆ ಹೆದ್ದಾರಿ ನಿರ್ಮಾಣ ಮಾಡಿದ ಖಾಸಗಿ ಕಂಪನಿಯೊಂದು ನಿಯಮಗಳನ್ನು ಗಾಳಿಗೆತೂರಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದೆ. ಇದರ ಪರಿಣಾಮ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಅಂಡರ್ಪಾಸ್ಗಳು, ಮೇಲ್ಸೇತುವೆಗಳು ಹಾಗೂ ಸರಿಯಾದ ಸೂಚನಾ ಫಲಕ, ಶೌಚಾಲಯ ವ್ಯವಸ್ಥೆ, ಲೈಟ್ ವ್ಯವಸ್ಥೆ ಇಲ್ಲದ ಹಿನ್ನೆಲೆ ಹೆದ್ದಾರಿ ಸಾವಿನ ಮಾರ್ಗವಾಗಿ ಪರಿಣಮಿಸಿದೆ ಎಂಬ ಆರೋಪಗಳಿವೆ.
ಹೀಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿದ್ದ ಕಂಪನಿಯವರನ್ನು ಕರೆಸಿ ಸಭೆ ನಡೆಸಿದ್ದರು. ಈ ವೇಳೆ ಅಪಘಾತ ವಲಯಗಳನ್ನು ಸೂಚಿಸಿ, ಅಲ್ಲಿ ಅಂಡರ್ಪಾಸ್ ನಿರ್ಮಾಣ, ಮೇಲ್ಸೇತುವೆ, ಹಾಗೂ ಸೂಚನಾ ಫಲಕಗಳು ಸೇರಿದಂತೆ ಸರ್ವೀಸ್ ರಸ್ತೆ ನಿರ್ಮಿಸುವಂತೆ ನಾಲ್ಕೈದು ಬಾರಿ ಹೇಳಿದ್ದರು. ಆದ್ರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಈಗ ಅಧಿಕಾರಿಗಳಿಗೆ ಡೆಡ್ಲೈನ್ ನೀಡಿದ್ದು, ಅಷ್ಟರೊಳಗೆ ಹೆದ್ದಾರಿಯಲ್ಲಿನ ಲೋಪಗಳನ್ನು ಸರಿಮಾಡದಿದ್ದರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.