ಕೋಲಾರ: ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ದೌರ್ಜನ್ಯ ಕಾಯ್ದೆ, ಮಲಹೊರುವ ಪದ್ಧತಿ ಕಾಯ್ದೆ, ಅಟ್ರಾಸಿಟಿ ಕಾಯ್ದೆಯಡಿ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ, ಪ್ರಾಂಶುಪಾಲೆ ಹಾಗೂ ಓರ್ವ ಶಿಕ್ಷಕನನ್ನು ಬಂಧಿಸಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವಸತಿ ಶಾಲೆಯೊಂದರಲ್ಲಿ ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ್ದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಲ್ಲಿ ಇಬ್ಬರನ್ನು ಭಾನುವಾರ ರಾತ್ರಿ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಮಾಸ್ತಿ ಠಾಣಾ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಪ್ರಾಥಮಿಕ ತನಿಖೆ ಪ್ರಕಾರ, ಡಿಸೆಂಬರ್ 1ರಂದು ಶಾಲೆಯ 8, 9 ಹಾಗೂ 10ನೇ ತರಗತಿಯ ಕೆಲ ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಚ ಮಾಡಿಸಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್ ಶ್ರೀನಿವಾಸ್ ಹಾಗೂ ಸಹಾಯಕ ನಿರ್ದೇಶಕ ಶಿವಕುಮಾರ್ ನೀಡಿದ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಮೊದಲ ಎಫ್ಐಆರ್ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಸಂಬಂಧ ದಾಖಲಾಗಿದ್ದು, ಅದರಂತೆ ಶಾಲೆಯ ಪ್ರಾಂಶುಪಾಲರನ್ನು ಬಂಧನ ಮಾಡಲಾಗಿದೆ. ಇನ್ನೊಂದು ಪ್ರಕರಣ ಪೋಕ್ಸೋ ಕಾಯ್ದೆ ಅಡಿ ದಾಖಲಾಗಿದ್ದು, ಓರ್ವ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐವರು ಅಮಾನತು: ಮಲದ ಗುಂಡಿ ಸ್ವಚ್ಛತೆ ಮಾಡಿಸಿದ್ದ ಘಟನೆ ಸಂಬಂಧ ಈಗಾಗಲೇ ಪ್ರಾಂಶುಪಾಲೆ, ವಾರ್ಡನ್, ಓರ್ವ ಹೊರಗುತ್ತಿಗೆ ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿತ್ತು. ಅಲ್ಲದೇ, ಇಬ್ಬರು ಪುರುಷ ಶಿಕ್ಷಕರನ್ನು ಪೋಕ್ಸೋ ಕಾಯಿದೆ ಮತ್ತು ದೈಹಿಕ ಶಿಕ್ಷೆ ಅಡಿ ಅಮಾನತು ಮಾಡಿ ಆದೇಶಿಸಲಾಗಿತ್ತು.
ಕೇಂದ್ರ ಸಚಿವರ ಭೇಟಿ: ವಸತಿ ಶಾಲೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ರಾಜ್ಯ ಸಚಿವರಾದ ಎ ನಾರಾಯಣಸ್ವಾಮಿ ಅವರು, ವಸತಿ ಶಾಲೆಗೆ ಭೇಟಿ ಕೊಟ್ಟಿದಾರೆ. ಇವರೊಂದಿಗೆ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಸಿಇಒ ಪದ್ಮ ಬಸಂತಪ್ಪ ಅವರು ಸಹ ಹಾಜರಿದ್ದರು. ಈ ವೇಳೆ ಕೇಂದ್ರ ಸಚಿವರು ವಸತಿ ಶಾಲೆ ಸೇರಿದಂತೆ ನಂತರ ಮಕ್ಕಳು ಇಳಿಸಿದ್ದ ಪಿಟ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ಇದಕ್ಕೆ ಸಂಬಂಧಿಸಿ ಮಾಹಿತಿ ನೀಡುವುದಕ್ಕೆ ಇಲ್ಲಿರುವಂತಹ ಸಿಬ್ಬಂದಿಗಳಿಗೆ ಅಥವಾ ಮಕ್ಕಳಿಗೆ ಆಗಲಿ ಯಾರಿಗೂ ಬೆದರಿಕೆ ಹಾಕದಂತೆ ಸಿಇಒ ಪದ್ಮ ಬಸಂತಪ್ಪ ಅವರಿಗೆ ಸೂಚನೆ ನೀಡಿದರು. ಈ ವೇಳೆ ಸಂಸದ ಎಸ್ ಮುನಿಸ್ವಾಮಿ ಅವರು ಸಹ ಸಾಥ್ ನೀಡಿದರು.
ಘಟನೆ ಖಂಡಿಸಿದ ಬಿ ವೈ ವಿಜಯೇಂದ್ರ : ಕೋಲಾರ ಜಿಲ್ಲೆಯ ವಸತಿ ನಿಲಯದ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಖಂಡಿಸಿದ್ದಾರೆ. ಈ ಘಟನೆಯ ವಸ್ತುಸ್ಥಿತಿ ಅಧ್ಯಯನಕ್ಕೆ ರಾಜ್ಯ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಅವರು ಪ್ರಕಟಣೆ ಹೊರಡಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ಸಮಿತಿ: ಈ ಆದೇಶದಂತೆ, ವಿಧಾನಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲದ ಗುಂಡಿ ಸ್ವಚ್ಛತೆ, ಮಕ್ಕಳಿಗೆ ಶಿಕ್ಷೆ ಕೊಡುವುದು ಸೇರಿದಂತೆ ಅಲ್ಲಿನ ಸಮಸ್ಯೆಗಳನ್ನು ಸಹ ಈ ಸಮಿತಿ ಪರಿಶೀಲಿಸಿತು. ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಾಂಶಗಳನ್ನು ಪರಿಶೀಲಿಸಿದ ಈ ಸಮಿತಿ ರಾಜ್ಯಾಧ್ಯಕ್ಷರಿಗೆ ವರದಿ ಕೂಡ ನೀಡಲಿದೆ.
ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗಿಳಿಸಿ ಸ್ವಚ್ಚಗೊಳಿಸಿದ ಪ್ರಕರಣ: ವಸತಿ ಶಾಲೆಯ ಪ್ರಾಂಶುಪಾಲೆ ಸೇರಿ ನಾಲ್ವರು ಅಮಾನತು