ಕೋಲಾರ: ಎಸ್.ಎನ್.ಆರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಆಸ್ಪತ್ರೆಯಲ್ಲಿ 1 ಆಕ್ಸಿಜನ್ ಪ್ಲಾಂಟ್ ಇದ್ದು, ಇನ್ನೊಂದು ಪ್ಲಾಂಟ್ ಹೊಂಡಾ ಕಂಪನಿ ನಿರ್ಮಾಣ ಮಾಡಲು ಮುಂದೆ ಬಂದಿದೆ. ಹತ್ತು ದಿನಗಳಲ್ಲಿ ಪ್ಲಾಂಟ್ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಎಸ್. ಮುನಿಸ್ವಾಮಿ ತಿಳಿಸಿದರು.
ನಗರದ ಎಸ್.ಎನ್.ಆರ್ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ವೈದ್ಯರು ಕೊರೊನಾ ಸೋಂಕಿತರನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳಬೇಕಿದೆ. ರೆಮ್ಡಿಸಿವಿರ್ ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಅವರಿಗೆ ಔಷಧಿ ಸಿಗುವ ಮೂಲ ಪತ್ತೆ ಹಚ್ಚಬೇಕಿದೆ. ಆಸ್ಪತ್ರೆಯ ಸ್ಟಾಪ್ ನರ್ಸ್ ಲಾಕ್ಡೌನ್ನಿಂದಾಗಿ ಕೆಲಸಕ್ಕೆ ಹೋಗಲು ಸಾರಿಗೆ ಸಮಸ್ಯೆ ಉಂಟಾಗಿದೆ ಎಂದು ಅಹವಾಲು ಕೊಟ್ಟಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಿಂದ ಬರುವ ಸಿಬ್ಬಂದಿಯನ್ನು ಕರೆತರಲು ಹಾಗೂ ಕರೆದುಕೊಂಡು ಹೋಗಲು ನಾನೇ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು.
ಇದನ್ನೂ ಓದಿ: 'ಹಣವಿಲ್ಲದಿದ್ರೆ ಹೇಳಲಿ, ನಾವೇ ಭಿಕ್ಷೆ ಬೇಡಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸುತ್ತೇವೆ'
ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆ ಇಲ್ಲ. ಜಿಲ್ಲೆಯಲ್ಲಿ ಸುಮಾರು 1 ಲಕ್ಷ 70 ಸಾವಿರಕ್ಕೂ ಹೆಚ್ಚು ಜನ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಸದ್ಯ 8 ಸಾವಿರ ಲಸಿಕೆ ಲಭ್ಯವಿದೆ. ಇನ್ನೂ, ಹೆಚ್ಚಿನ ಲಸಿಕೆ ಕೊಡಲೆ ಸರಬರಾಜು ಅಗಲಿದೆ. ಆರೋಗ್ಯ ಸಚಿವ ಸುಧಾಕರ್ ಜೊತೆ ಆಸ್ಪತ್ರೆಯಲ್ಲಿರುವ ನ್ಯೂನತೆಗಳ ಬಗ್ಗೆ ಚರ್ಚೆ ನಡೆಸಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕೊರೊನಾ ಬಗ್ಗೆ ಭಯಪಡದೆ ಜನರು ಧೈರ್ಯವಾಗಿ ಇರಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಕೊರೊನಾ ಮುಕ್ತ ಜಿಲ್ಲೆ ಮಾಡಲು ವೈದ್ಯರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು. ಇದೇ ವೇಳೆ ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿಜನ್ ಪ್ಲಾಂಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಂಡಾ ಕಂಪನಿ ಆಧಿಕಾರಿ ಜೊತೆ ಮತ್ತೊಂದು ಪ್ಲಾಂಟ್ ನಿರ್ಮಿಸಲು ಜಾಗ ವೀಕ್ಷಣೆ ನಡೆಸಿದರು.