ಕೋಲಾರ: ಕೊರೊನಾ ವಿರುದ್ಧ ಹೋರಾಡುವಲ್ಲಿ ಜಿಲ್ಲಾಧಿಕಾರಿ ಹಗಲು ರಾತ್ರಿ ಪರಿಶ್ರಮ ಪಡುತ್ತಿದ್ದಾರೆ. ಕೋಲಾರ ಜಿಲ್ಲೆಗೆ ಕೂಗಳತೆ ದೂರದಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಉದ್ಯೋಗ, ಶಿಕ್ಷಣ, ವ್ಯಾಪಾರ-ವಹಿವಾಟು, ಹೀಗೆ ಹಲವು ಕಾರಣಗಳಿಗೆ ರಾಜಧಾನಿಯನ್ನೆ ಅವಲಂಬಿಸಿದ್ದಾರೆ.
ಅದರಲ್ಲೂ ಕೋಲಾರ ಜಿಲ್ಲೆಯಿಂದ ಕೂಡ ನಿತ್ಯ ಸಾವಿರಾರು ಜನರು ಹೋಗಿ ಬರುತ್ತಾರೆ. ಸದ್ಯ ಕರ್ನಾಟಕದ ಕೊರೊನಾ ಹಾಟ್ಸ್ಪಾಟ್ ಎನಿಸಿರುವ ಬೆಂಗಳೂರಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ತಮ್ಮದೇ ಆದ ಟಾಸ್ಕ್ಫೋರ್ಸ್ ತಂಡ ರಚಿಸಿದ್ದಾರೆ.
ಜಿಲ್ಲಾಧಿಕಾರಿ ಸತ್ಯಭಾಮ, ಆರೋಗ್ಯ ಅಧಿಕಾರಿಗಳು, ಪೊಲೀಸರು ಹಾಗೂ ಆಶಾ ಕಾರ್ಯಕರ್ತರೆಯರನ್ನು ಒಳಗೊಂಡಂತೆ ಬೂತ್ ಮಟ್ಟದಲ್ಲಿ ಟಾಸ್ಕ್ಫೋರ್ಸ್ ತಂಡ ಸಜ್ಜುಗೊಳಿಲಾಗಿದ್ದು, ಜಿಲ್ಲೆಗೆ ಯಾರೇ ಬಂದರೂ ತಕ್ಷಣದಲ್ಲಿ ಅವರ ಪೂರ್ಣ ಮಾಹಿತಿ ಜಿಲ್ಲಾಧಿಕಾರಿಗಳ ಕೈ ಸೇರುತ್ತಿದೆ. ಬೆಂಗಳೂರು ಗಡಿಭಾಗಗಳಲ್ಲಿ 13 ಚೆಕ್ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿಂದ ಬರುವ ಜನರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಇಷ್ಟೇ ಅಲ್ಲದೆ ಸೇವಾ ಸಿಂಧು ಆ್ಯಪ್ನಲ್ಲಿ ನೊಂದಣಿಯಾದವರನ್ನು ಮಾತ್ರ, ಸಂಪೂರ್ಣ ಪರಿಶೀಲನೆಯೊಂದಿಗೆ ರಾಜ್ಯದ ಗಡಿಗಳ ಮೂಲಕ ಜಿಲ್ಲೆಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ ಇದೇ ತಂಡ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದೆ.