ಕೋಲಾರ: ಇದು ದಶಕಗಳಿಂದ ಮಳೆ ಇಲ್ಲದೇ ಸೊರಗುತ್ತಿರುವ ಬರಪೀಡಿತ ಜಿಲ್ಲೆ. ಯಾವುದೇ ನದಿ ನಾಲೆಗಳಿಲ್ಲದ ಈ ಜಿಲ್ಲೆಗೆ ಸ್ವಾತಂತ್ರ್ಯ ಬಂದಾಗಿನಿಂದ ಒಂದೇ ಒಂದು ನೀರಾವರಿ ಯೋಜನೆಯೂ ಇಲ್ಲ. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳಿಗೆ ನಡೆದ ಹೋರಾಟಗಳು ಅದೆಷ್ಟೋ ಲೆಕ್ಕಕ್ಕಿಲ್ಲ. ಈಗ ಕಳೆದೆರೆಡು ವರ್ಷಗಳಿಂದ ಜಿಲ್ಲೆಗೆ ಶುಕ್ರದೆಸೆ ಮೂಡಿದ್ದು, ವಿವಿಧ ಯೋಜನೆಗಳ ಮೂಲಕ ಜಿಲ್ಲೆಗೆ ನೀರು ಹರಿದು ಬರುತ್ತಿದೆ.
ಹೌದು, ಸುಮಾರು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಲಾರ ಜಿಲ್ಲೆಯ 126 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡ ಅಂದಿನ ಸಿದ್ದರಾಮಯ್ಯ ಸರ್ಕಾರ, ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಸಂಸ್ಕರಿಸಿ ತಲುಪಿಸುವ ಉಪಾಯ ಮಾಡಿತ್ತು. ಸದ್ಯ ಬೆಳ್ಳಂದೂರು ಕೆರೆಯಿಂದ ಪೈಪ್ಲೈನ್ ಮೂಲಕ ಲಕ್ಷ್ಮಿಸಾಗರ, ನರಸಾಪುರ ಕೆರೆಗೆ 240 ಎಂಎಲ್ಡಿ ನೀರನ್ನು ಹರಿಸಲಾಗುತಿದೆ. ಕೆರೆಗೆ ಹರಿದು ಬಂದಿರುವ ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಮುಳಬಾಗಲು ತಾಲೂಕು ಸೇರಿದಂತೆ 76 ಕೆರೆಗಳನ್ನು ತುಂಬಿಸಲಾಗಿದೆ. ಇದರ ಮಧ್ಯೆ ಬಿಜೆಪಿ ಸರ್ಕಾರ ಕೆ. ಸಿ. ವ್ಯಾಲಿಯ ಎರಡನೇ ಹಂತದಲ್ಲಿ 450 ಕೋಟಿ ರೂಪಾಯಿಗಳ ವೆಚ್ಚದಲ್ಲಿ 225 ಕೆರೆಗಳನ್ನು ತುಂಬಿಸಲು ಡಿಪಿಆರ್ ತಯಾರಿಸಿದೆ.
ಇನ್ನು ಕೆಸಿ ವ್ಯಾಲಿಯ ಯೋಜನೆಗಳ ಜೊತೆಗೆ ಸುಮಾರು 240 ಕೋಟಿ ರೂಪಾಯಿಗಳ ವೆಚ್ಚದ ಬಹುನಿರೀಕ್ಷಿತ ಯೋಜನೆಯಾದ ಯರಗೋಳ್ ಯೋಜನೆ ಸಹ ಸದ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಸಂಪೂರ್ಣ ಕುಡಿಯುವ ನೀರಿನ ಯೋಜನೆಯಾಗಿರುವ ಯರಗೋಳ್ ಡ್ಯಾಂನಿಂದ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ನೀರು ಒದಗಿಸಲಾಗುವುದು. ಜನವರಿ 26ಕ್ಕೆ ಯೋಜನೆ ಲೋಕಾರ್ಪಣೆಯಾಗಲಿದೆ. ಇದರ ಜೊತೆಗೆ ಎತ್ತಿನ ಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಗಳಲ್ಲಿ ಬೀಳುವಂತಹ 24 ಟಿಎಂಸಿ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸಲು ಸಹ ಸಿದ್ದತೆ ನಡೆಯುತ್ತಿದ್ದು, ಜಿಲ್ಲೆಗೆ ಸದ್ಯದಲ್ಲಿ ಶುಕ್ರದೆಸೆ ಕೂಡಿ ಬರುವುದು ಖಚಿತವಾಗಿದೆ. ಇದರಿಂದ ರೈತರ ಮುಖದಲ್ಲೂ ಮಂದಹಾಸ ಮೂಡಿದಂತಾಗಿದೆ.
ಶಾಶ್ವತವಾದ ನೀರಾವರಿ ಯೋಜನೆಗಳು ಕೋಲಾರಕ್ಕೆ ಮರೀಚಿಕೆಯಾಗಿಯೇ ಉಳಿದಿತ್ತು. ನೀರಿನ ಕೊರತೆಯಿಂದಾಗಿ ಕುಡಿಯುವುದಕ್ಕೂ ಫ್ಲೋರೈಡ್ ನೀರನ್ನೇ ಬಳಸಿದ ಜನತೆಗೆ ಈಗ ಕೊಂಚ ಸಂತಸವಾಗಿರೋದಂತೂ ಸತ್ಯ.