ಕೋಲಾರ: ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೀರನಕುಪ್ಪ ಗ್ರಾಮದಲ್ಲಿ ಮೇ 9 ರಂದು ರಾತ್ರಿ ಗ್ರಾಮದ ನಾರಾಯಣಪ್ಪ ಎಂಬುವರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀರನಕುಪ್ಪ ಗ್ರಾಮದಲ್ಲಿ ಇಂದಿಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸವರ್ಣಿಯ ಕೃಷ್ಣಾರೆಡ್ಡಿ ಎಂಬುವವರು ಭೋವಿ ಜನಾಂಗಕ್ಕೆ ಸೇರಿದ್ದ ನಾರಾಯಣಪ್ಪನನ್ನು ಕೊಲೆ ಮಾಡಿದ್ದರು.
ಕೃಷ್ಣಾರೆಡ್ಡಿ ಕೊಲೆ ಮಾಡಿ ನಾರಾಯಣಪ್ಪನ ಕುಟುಂಬಕ್ಕೆ ಬೆದರಿಕೆ ಹಾಕಿದ್ದ, ಈ ಹಿನ್ನೆಲೆಯಲ್ಲಿ ಇಂದು ಗ್ರಾಮಕ್ಕೆ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಇಷ್ಟೊಂದು ಭೀಕರವಾಗಿ ಕೊಲೆ ಮಾಡಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇದರಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ ಕೊಲೆ ನಡೆದಾಗ ಇದ್ದ ನಾರಾಯಣಪ್ಪ ಕುಟುಂಬಸ್ಥರು ನೀಡಿರುವ ಕೆಲವರ ಹೆಸರುಗಳನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಹಾಗಾಗಿ ಇಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಈ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈವಾಡ ಇರುವ ಎಲ್ಲರನ್ನೂ ಬಂಧಿಸಬೇಕು. ಜೊತೆಗೆ ಈ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಸ್ವಾಮೀಜಿಗಳು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಈ ಕುರಿತು ಗೃಹಸಚಿವರ ಬಳಿಯೂ ಮಾತನಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕುವೆಂಪುಗೆ ಅವಮಾನ : ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಒಕ್ಕಲಿಗರ ಸಂಘದ ಒತ್ತಾಯ