ಕೋಲಾರ: ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಹಾಗೂ ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್ಟಿಆರ್ ಭಾಗಿಯಾಗುತ್ತಿರುವುದು ಖುಷಿ ತಂದಿದೆ ಎಂದು ಸಚಿವ ಮುನಿರತ್ನ ಹೇಳಿದರು.
ಮಧ್ಯಾಹ್ನ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಟರು ಆಗಮಿಸಿದ್ದು, ಅವರನ್ನು ಸ್ವಾಗತಿಸುವ ಜವಾಬ್ದಾರಿ ನನ್ನದು. ಸಂಜೆ 4 ಗಂಟೆಗೆ ಗಣ್ಯರನ್ನು ವಿಧಾನಸೌಧಕ್ಕೆ ಕರೆತರಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ಗಳಿಬ್ಬರೂ ಕನ್ನಡದಲ್ಲಿಯೇ ಮಾತನಾಡಲಿದ್ದಾರೆ. 67ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ನಮಗೆ ಇದೊಂದು ಸುದಿನ. ಕಾರ್ಯಕ್ರಮ ಮುಗಿಯುವವರೆಗೂ ನಾನು ಅವರ ಜೊತೆಯಲ್ಲಿಯೇ ಇರಲಿದ್ದೇನೆ ಎಂದರು.
ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಕ್ಕಿಂತ, ಅವರು ನಮ್ಮನ್ನು ಅಗಲಿರುವುದು ತುಂಬಾ ನೋವಿನ ವಿಚಾರ. ಈ ಹಿಂದೆ ಡಾ.ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಇದೀಗ ಮತ್ತೆ ಅದೇ ಕುಟುಂಬದಲ್ಲಿ ಪುನೀತ್ ಅವರಿಗೆ ಪ್ರಶಸ್ತಿ ಸಲ್ಲುತ್ತಿದೆ. ಸರ್ಕಾರದ ವತಿಯಿಂದ ಮೇರುನಟನ ಕುಟುಂಬದ ಇಬ್ಬರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಹೆಗ್ಗಳಿಕೆ ಎಂದು ಸಚಿವ ಮುನಿರತ್ನ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ