ಕೋಲಾರ : 2023ರ ವಿಧಾನಸಭಾ ಚುನಾವಣೆ ಒಂದು ವರ್ಷ ಇರುವಾಗಲೇ ಕೋಲಾರದಲ್ಲಿ ಬಿಜೆಪಿ ಅರಳಿಸಲು ಕಾರ್ಯತಂತ್ರ ಶುರುವಾಗಿದೆ. ಇಬ್ಬರು ಮಾಜಿ ಶಾಸಕರುಗಳನ್ನು ಪಕ್ಷಕ್ಕೆ ಸೆಳೆದಿರುವ ಬಿಜೆಪಿ ಪಕ್ಷ, ಮೇಲಿಂದ ಮೇಲೆ ಕಾರ್ಯತಂತ್ರ ರೂಪಿಸುವ ಮೂಲಕ ಪಕ್ಷ ಬಲವರ್ದನೆ ಜೊತೆಗೆ ಕೋಲಾರ ಕೇಸರಿಕರಣ ವರ್ಕ್ಔಟ್ ಶುರು ಮಾಡಿದೆ.
ಕೋಲಾರ ಜಿಲ್ಲೆಯ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಕೋಲಾರದಲ್ಲಿ ಕನಿಷ್ಠ ಮೂರು ನಾಲ್ಕು ಕ್ಷೇತ್ರದಲ್ಲಿ ಆದರೂ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ಸಲುವಾಗಿ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ಮಾಲೂರು ಜೆಡಿಎಸ್ ಮಾಜಿ ಶಾಸಕ ಮಂಜುನಾಥಗೌಡ ಹಾಗೂ ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಜೊತೆಗೆ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲಾಕಾಂಗ್ರೇಸ್ ಅಧ್ಯಕ್ಷ ಸೇರಿದಂತೆ ಕೆಲವು ಮುಖಂಡರುಗಳು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಅಣ್ಣಾಮಲೈಯಿಂದ ಬೈಕ್ ರ್ಯಾಲಿ : ಇದರ ಬೆನ್ನಲ್ಲೇ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈರಿಂದ ತಮಿಳು ಪ್ರಾಬಲ್ಯವಿರುವ ಕೋಲಾರ, ಬಂಗಾರಪೇಟೆ, ಕೆಜಿಎಫ್ನಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ತಮಿಳು ಪ್ರಾಬಲ್ಯ ಇರುವೆಡೆ ಹವಾ ಎಬ್ಬಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಕೋಲಾರ ಜಿಲ್ಲೆಯನ್ನು ಟಾರ್ಗೆಟ್ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರದಲ್ಲಾದರೂ ಗೆಲ್ಲಲೇಬೇಕು ಎಂಬ ಪಣ ತೊಟ್ಟಿದೆ.
ಭಿನ್ನಮತ : ಒಂದೆಡೆ ಪಕ್ಷ ಬಲವರ್ದನೆ ಕೆಲಸ ನಡೆಯುತ್ತಿದ್ದರೆ, ಇನ್ನೊಂದೆಡೆ ಪಕ್ಷದಲ್ಲಿ ಮನಸ್ಥಾಪ ಹಾಗೂ ಭಿನ್ನಮತ ಕೂಡ ಕಂಡು ಬರುತ್ತಿದೆ. ಕೆಜಿಎಫ್ ಮಾಜಿ ಶಾಸಕ ಸಂಪಂಗಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅಣ್ಣಾಮಲೈ ಬಂದ ಕಾರ್ಯಕ್ರಮದಲ್ಲಿ ವೈ ಸಂಪಂಗಿಯವರನ್ನು ದೂರವಿಟ್ಟು ಕಾರ್ಯಕ್ರಮ ಮಾಡಲಾಯಿತು.
ಈ ಮೂಲಕ ವಲಸಿಗರು ಹಾಗೂ ಮೂಲ ಬಿಜೆಪಿ ಎಂಬ ಎರಡು ಬಣಗಳು ಶುರುವಾಗಿದೆ. ಇದು ಕೆಜಿಎಫ್ ಕಥೆಯಾದರೆ, ಮಾಲೂರಿನಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಶಾಸಕ ಮಂಜುನಾಥಗೌಡ ಅವರು ಪಕ್ಷ ಸೇರ್ಪಡೆಯನ್ನು ವಿರೋಧಿಸಿ ಮಾಲೂರು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಪ್ರತಿಭಟನಾ ರ್ಯಾಲಿ ಹೊರಟಿದ್ದರು. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ತಯಾರಿ ಆರಂಭಿಸಿದೆ. ಅದರ ಜೊತೆಗೆ ಒಂದೆಡೆ ಪಕ್ಷಕ್ಕೆ ಹೊಸಬರನ್ನು ಸೇರ್ಪಡೆ ಮಾಡಿಕೊಂಡು ಪಕ್ಷದ ಶಕ್ತಿ ಹೆಚ್ಚಿಸುತ್ತಾ ಹೋದಂತೆ, ಮತ್ತೊಂದೆಡೆ ಭಿನ್ನಮತ ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಸಚಿವ ಅಶ್ವತ್ಥ್ ನಾರಾಯಣ, ಬಿಜೆಪಿ ಎಂಎಲ್ಸಿ ಅಭ್ಯರ್ಥಿ ರವಿಶಂಕರ್ ವಿರುದ್ಧ ಎಫ್‌ಐಆರ್