ಕೋಲಾರ: ನವಜಾತ ಜಿಂಕೆ ಮರಿಯೊಂದು ಅನಾಥವಾಗಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ಇದನ್ನು ಸಾರ್ವಜನಿಕರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೋಲಾರ ನಗರದ ಆರ್ಟಿಓ ಕಚೇರಿ ಹಿಂಬಾಗದಲ್ಲಿರುವ ರೈಲ್ವೆ ಹಳಿಗಳ ಮೇಲೆ ಪುಟಾಣಿ ಜಿಂಕೆ ಮರಿಯೊಂದು ಪತ್ತೆಯಾಗಿದ್ದು, ಗಾಬರಿಯಲ್ಲಿ ತಾಯಿಯನ್ನು ಬಿಟ್ಟು ಜಿಂಕೆ ಮರಿ ಓಡಿ ಬಂದಿದೆ ಎನ್ನಲಾಗಿದೆ. ನಿನ್ನೆಯಷ್ಟೆ ಜನಿಸಿದೆ ಎನ್ನಲಾದ ಈ ಮರಿ, ಗುಂಪಿನಿಂದ ಬೇರ್ಪಟ್ಟಿದೆ. ತಾಯಿ ಜಿಂಕೆ ಟೊಮ್ಯಾಟೋ ತೋಟದಲ್ಲಿ ಮರಿಗೆ ಜನ್ಮ ನೀಡಿರಬಹುದು ಎನ್ನಲಾಗಿದೆ. ಇನ್ನು ಕೊರೊನಾ ಹಿನ್ನೆಲೆ, ರೈಲು ಸಂಚಾರ ಸ್ಥಗಿತವಾಗಿರುವ ಕಾರಣ ಅದೃಷ್ಟವಶಾತ್ ನವ ಜಾತ ಜಿಂಕೆ ಮರಿ ಪ್ರಾಣಾಪಾಯದಿಂದ ಪಾರಾಗಿದೆ.
ಅರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಸಂರಕ್ಷಿಸಲ್ಪಟ್ಟ ಜಿಂಕೆ ಮರಿಯನ್ನು ವಶಕ್ಕೆ ಪಡೆದು ಸೂಕ್ತ ಚಿಕಿತ್ಸೆ ಮತ್ತು ಆರೈಕೆಗೆ ಒಳಪಡಿಸಿದ್ದಾರೆ.