ಕೋಲಾರ: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ತೋರಿಸುವುದಕ್ಕೋಸ್ಕರ ಡಿ. ಕೆ. ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ, ಅವರು ಒಬ್ಬ ನಿಪುಣ ಕಲಾವಿದ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಡೀ ರಾಜ್ಯ ಯಾವ ರೀತಿ ಪ್ರಯತ್ನ ಮಾಡಬೇಕು ಎಂಬ ಯೋಜನೆಗಳನ್ನು ರೂಪಿಸುತ್ತಿದೆ ಅದಕ್ಕೆ ತಕ್ಕಂತೆ ಜನರೂ ಸಹ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದ ಎರಡು ಕಾರ್ಯಕ್ರಮಗಳಿಗೂ ಎಲ್ಲಾ ಪಕ್ಷಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ, ಜೊತೆಗೆ ಪಿಎಂ ನಿಧಿಗೆ ಸಾಕಷ್ಟು ಹಣ ಸಹ ಸಂಗ್ರಹವಾಗಿರುವಂತಹ ಸಮಯದಲ್ಲಿ ಡಿಕೆಶಿ ಅವರು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಇನ್ನು ಡಿಕೆಶಿ ಅವರು ರಾಜ್ಯದಲ್ಲಿ ಕೊರೊನಾ ತಡೆಗಟ್ಟುವಲ್ಲಿ ಸಲಹೆ ನೀಡಲಿ, ಆದ್ರೆ ಲಾಕ್ ಡೌನ್ ಸರಿಯಾಗಿ ವ್ಯವಸ್ಥೆ ಮಾಡಿಲ್ಲ, ತಡೆಗಟ್ಟಿಲ್ಲ ಎಂದು ರಾಜಕಾರಣ ಮಾಡಬೇಡುವುದು ಬೇಡ ಎಂದು ಹೇಳಿದ್ರು. ಜೊತೆಗೆ ಗ್ರಾಮೀಣಾಭಿವೃದ್ದಿ ಇಲಾಖೆ, ಈಶ್ವರಪ್ಪ ಮಲಗಿದ್ದಾರೆ ಎನ್ನುವುದು ಬೇಡ, ಇಷ್ಟೂ ದಿನ ಇವರೆಲ್ಲಾ ಎಲ್ಲಿ ಮಲಗಿದ್ದರು ಎಂದು ತಿಳಿದಿದೆ ಎಂದು ಡಿಕೆಶಿ ವಿರುದ್ದ ಕುಟುಕಿದರು.
ಇನ್ನು ದೇಶದಲ್ಲಿ ಕೆಲವು ಮುಸಲ್ಮಾನರು ಮಾಡಿರುವ ತಪ್ಪನ್ನು ಇಡೀ ಸಮುದಾಯವನ್ನ ಹೊಣೆ ಮಾಡಬೇಡಿ ಎಂದು ಸರ್ಕಾರ ಹೇಳುತ್ತಿರುವಾಗ, ಮುಸಲ್ಮಾನರಿಗೆ ಸರ್ಕಾರ ತೊಂದರೆ ಕೊಡುತ್ತಿದೆ ಎಂದು ನೇರವಾಗಿ ಡಿ.ಕೆ.ಶಿ ಅವರು ಹೇಳುತ್ತಿದ್ದಾರೆ. ಈ ಮೂಲಕ ಕೋಮು ಸೌಹಾರ್ದತೆಯನ್ನ ಕದಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೆ ಜಮೀರ್ ಅಹ್ಮದ್ ಬಗ್ಗೆ ಮಾತನಾಡಿದರೆ, ತಬ್ಲಿಘಿ ಬಗ್ಗೆ ಮಾತನಾಡಿದರೆ ಡಿಕೆಶಿ ಅವರಿಗೆ ಯಾಕೆ ಸಿಟ್ಟು ಬರುತ್ತದೆ ಎಂದು ಪ್ರಶ್ನಿಸಿದ್ರು. ಮುಸಲ್ಮಾನರೇ ತಮಗೆ ಆಸ್ತಿ, ಅವರಿಂದಲೇ ವೋಟು ಬರುತ್ತದೆ ಎಂಬ ರೀತಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಆದ್ರೆ ರಾಜ್ಯದ ಜನತೆ ಇದನ್ನ ಒಪ್ಪುವುದಿಲ್ಲ, ಡಿಕೆಶಿ ಅವರು ಹಿಂದೂ ಮುಸ್ಲಿಂ ಎಂಬ ಭಾವನೆ ತರುತ್ತಿದ್ದಾರೆ ಎಂದರು.