ಕೋಲಾರ: ಒಂದು ಕಾಲದಲ್ಲಿ ಚಿನ್ನ ಬೆಳೆಯುತ್ತಿದ್ದ ನೆಲ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಅದೇ ನೆಲಕ್ಕೆ ಶುಕ್ರದೆಸೆ ಬಂದಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ ಜೊತೆಗೆ ಬಂದರು ಸೇರಿದಂತೆ ಮೂರು ರಾಜ್ಯಗಳಿಗೆ ಸಲೀಸಾಗಿ ಸಂಪರ್ಕ ಕಲ್ಪಿಸುವ ಪ್ರದೇಶವಾಗಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಣು ಇದೀಗ ಚಿನ್ನದ ನಾಡಿನ ಮೇಲೆ ಬಿದ್ದಿದೆ. ಹಾಗಾಗಿ ನೆನೆಗುದಿಗೆ ಬಿದ್ದಿದ್ದ ಪ್ರದೇಶಕ್ಕೆ ಒಂದು ರೀತಿ ಶುಕ್ರದೆಸೆ ಬಂದಂತಾಗಿದೆ.
ಕೆಜಿಎಫ್ ತಾಲೂಕಿನ ಹೆಚ್. ಗೊಲ್ಲಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಂಸದರು ಹಾಗೂ ಶಾಸಕರು ಇಂದು ಚಿನ್ನದ ಗಣಿ ಪ್ರದೇಶದ ಸ್ಥಳ ಪರಿಶೀಲನೆ ಮಾಡಿದರು. ಸ್ಥಳೀಯರು ಇವರನ್ನೆಲ್ಲಾ ಅದ್ಧೂರಿಯಿಂದ ಸ್ವಾಗತ ಮಾಡಿದರು.
ಕಳೆದ 20 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 12,000 ಎಕರೆ ಜಾಗವನ್ನು ಕೈಗಾರಿಕಾ ಪ್ರದೇಶವನ್ನಾಗಿ ಮಾಡಬೇಕು. ಅಲ್ಲಿಯ ಜನರಿಗೆ ಉದ್ಯೋಗ ನೀಡಬೇಕು ಎಂಬ ಹತ್ತು ಹಲವು ಯೋಜನೆಗಳ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿರುವ ಹಿನ್ನೆಲೆ ಇಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಥಳ ಪರಿಶೀನೆ ನಡೆಸಿದರು.
ಈ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರು ಚಿನ್ನದ ಗಣಿ ಪ್ರದೇಶದಲ್ಲಿ ಯಾವುದೇ ಸೈಸರ್ಗಿಕ ಸಂಪತ್ತು ಇಲ್ಲದಿರುವ ಬಗ್ಗೆ ತಮ್ಮ ಇಲಾಖೆಯಿಂದ ತನಿಖೆ ಮಾಡಿಸಿದ್ದಾರೆ. ಜೊತೆಗೆ ಅಲ್ಲಿ ಇನ್ನು ಮುಂದೆ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲವೆಂದು ವರದಿ ಬಂದರೆ ಚಿನ್ನದ ಗಣಿ ಪ್ರದೇಶವನ್ನು ಕೆಐಡಿಬಿಗೆ ಭೂಮಿ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಕೆಜಿಎಫ್ ಚಿನ್ನದ ಗಣಿಗೆ ಸೇರಿದ ಒಟ್ಟು 12,109 ಎಕರೆ ಭೂಮಿಯಲ್ಲಿ 3200 ಎಕರೆ ಭೂಮಿ ಖಾಲಿ ಇದೆ. ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಬೇಕಾದ ವ್ಯವಸ್ಥೆ ಇದೆ. ಸದ್ಯ ಈ ಪ್ರಕ್ರಿಯೆಗೆ ಆರು ತಿಂಗಳ ಕಾಲಾವಕಾಶ ಬೇಕಾಗಿದ್ದು ಅಷ್ಟರಲ್ಲಿ ಕೈಗಾರಿಕೆ ಸ್ಥಾಪನೆಗೆ ಬೇಕಾದ ಸಿದ್ದತೆಯನ್ನು ಮಾಡಿಕೊಳ್ಳುವುದಾಗಿ ಶೆಟ್ಟರ್ ತಿಳಿಸಿದ್ದಾರೆ.
ಸಾವಿರಾರು ಎಕರೆ ಭೂಮಿ ಖಾಲಿ ಇದೆ ಅಂದ ಮಾತ್ರಕ್ಕೆ ಇಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಮುಂದಾಗಿಲ್ಲ. ಇಲ್ಲಿ ಉತ್ತಮ ರೈಲು ಸಂಪರ್ಕದ ವ್ಯವಸ್ಥೆ ಇದೆ. ಚೆನ್ನೈ ಬಂದರು ಸೇರಿದಂತೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಹತ್ತಿರವಿದೆ ಅನ್ನೋ ಕಾರಣಕ್ಕೆ ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜೊತೆಗೆ ಚಿನ್ನದ ಗಣಿ ಮುಚ್ಚಿದ ನಂತರ ಸಾವಿರಾರು ಕಾರ್ಮಿಕರ ಕುಟುಂಬಗಳು ನಿರುದ್ಯೋಗದಿಂದ ಬೀದಿಪಾಲಾಗಿದ್ದಾರೆ. ಹಾಗಾಗಿ ಈ ಭಾಗದ ಜನರಿಗೆ ಒಂದು ಉದ್ಯೋಗ ಸಿಕ್ಕಂತಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಇಲ್ಲಿ ಕೈಗಾರಿಕೆ ಸ್ಥಾಪನೆ ಆಗಲೇ ಬೇಕಿದೆ. ಆದ್ರೆ ಇಂಥ ಪ್ರಯತ್ನ ಹಲವು ಸರ್ಕಾರಗಳ ಕಾಲದಲ್ಲೂ ನಡೆದಿದೆ. ಕೇವಲ ಹೇಳಿಕೆಗೆಳಿಗಷ್ಟೇ ನಿಲ್ಲಬಾರದು, ಇದು ಕಾರ್ಯರೂಪಕ್ಕೂ ಬರಬೇಕು ಎನ್ನುತ್ತಾರೆ ಶಾಸಕಿ ರೂಪಾ ಶಶಿಧರ್.
ಒಟ್ಟಾರೆ ಒಂದು ಕಾಲದಲ್ಲಿ ವಿಶ್ವಕ್ಕೆ ಚಿನ್ನ ಬೆಳೆದುಕೊಟ್ಟ ಕೆಜಿಎಫ್ಗೆ ಎರಡು ದಶಕಗಳ ನಂತರ ಮತ್ತೆ ಶುಕ್ರದೆಸೆಯ ಕೂಡಿ ಬಂದಿದೆ ಎಂದರೆ ತಪ್ಪಾಗಲಾರದು.