ಕೋಲಾರ : ಕೋಲಾರ ಕ್ಷೇತ್ರದಲ್ಲಿ ನನ್ನೆದುರು ಯಾರೇ ಅಭ್ಯರ್ಥಿಯಾದರೂ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಆರ್.ವರ್ತೂರ್ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಘೋಷಣೆಯಾದ ಬಳಿಕ ಕೋಲಾರದಲ್ಲಿಂದು ವಿಜಯೋತ್ಸವ ಆಚರಣೆ ಮಾಡಿ ನಗರದ ಡೂಂಲೈಟ್ ವೃತ್ತದಲ್ಲಿನ ಗಣೇಶ ದೇವಾಲಯದಲ್ಲಿ ಅವರು ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಿದ್ದರಾಮಯ್ಯ ಅಭ್ಯರ್ಥಿಯಾದರೂ ಇನ್ನೂ 10 ಸಾವಿರ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ. ಬಿಜೆಪಿಗೆ ಸೇರಿದ ನಂತರ ನನಗೆ ಆನೆ ಬಲ ಬಂದಂತಾಗಿದೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ಹೈಕಮಾಂಡ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಇಲ್ಲ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ನಾನು ಇನ್ನೂ ಹತ್ತು ಸಾವಿರ ಹೆಚ್ಚಿನ ಮತಗಳಿಂದ ಗೆಲ್ಲುವುದಾಗಿ ವರ್ತೂರು ಪ್ರಕಾಶ್ ಹೇಳಿದರು. ಕೋಲಾರದಲ್ಲಿ ಮಾತ್ರವಲ್ಲದೆ ಹಿಂದುಳಿದ ವರ್ಗಗಳು ರಾಜ್ಯದಲ್ಲಿ ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲಾ ಪ್ರವಾಸ ಮಾಡಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ಬರುವಂತೆ ಮಾಡುತ್ತೇನೆ. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದರು.
ಹೈಕಮಾಂಡ್ ಅನುಮತಿ ಕೊಟ್ಟರೆ ಕೋಲಾರದಲ್ಲಿ ಸಮಾವೇಶ ಮಾಡಲಾಗುವುದು. ಕಾಂಗ್ರೆಸ್ ರೀತಿ ಕೇವಲ ಐದು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡುವುದಿಲ್ಲ. ನಾನು, ಸಂಸದ ಮುನಿಸ್ವಾಮಿ ಅವರು ಸೇರಿ ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶ ಮಾಡುವುದಾಗಿ ಹೇಳಿದರು.
ಸಂಸದ ಮುನಿಸ್ವಾಮಿ ಹೇಳಿಕೆ: ಈ ಬಾರಿ ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದಾಗಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಘೋಷಣೆ ಆಗಿರುವ ಅಭ್ಯರ್ಥಿಗಳೊಂದಿಗೆ ಉಳಿದ ಆಕಾಂಕ್ಷಿಗಳನ್ನು ಒಟ್ಟಾಗಿ ಕರೆದುಕೊಂಡು ಯಾವುದೇ ಗೊಂದಲ ಇಲ್ಲದೆ ಈ ಭಾರಿ ಚುನಾವಣೆ ಎದುರಿಸಲಾಗುವುದು ಎಂದರು.
ನಾಳೆ ಕೆಜಿಎಫ್ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಹೇಳಿದರು. ಮಾಲೂರು ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾತನಾಡಿ, ಆಕಾಂಕ್ಷಿಯಾಗಿದ್ದ ಹೂಡಿ ವಿಜಯ್ ಕುಮಾರ್ ಅವರಿಗೆ ಇನ್ನೂ ಭವಿಷ್ಯ ಇದೆ. ಅವರ ಮನವೊಲಿಸಿ ಚುನಾವಣೆ ನಡೆಸುತ್ತೇವೆ. ಆದರೆ ಅವರೊಂದಿಗೆ ಇರುವಂತಹ ಕೆಲವರು ಕಾಂಗ್ರೆಸ್ನೊಂದಿಗೆ ಶಾಮೀಲು ಆಗಿದ್ದಾರೆ. ಅವರ ಹೇಳಿಕೆಗಳನ್ನು ಕೇಳಿಕೊಂಡು ಬೇರೆ ನಿರ್ಧಾರ ತೆಗೆದುಕೊಳ್ಳಬಾರದು. ಅವರಿಗೆ ಪಕ್ಷದಲ್ಲಿ ಏನು ಸ್ಥಾನಮಾನ ನೀಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಇದನ್ನೂ ಓದಿ : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ತವನಪ್ಪ ಅಷ್ಟಗಿ ರಾಜೀನಾಮೆ