ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ರಾತ್ರಿ ಬೀಗ ಹಾಕಿದ್ದ ಆರು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಮಾಲೂರು ಪಟ್ಟಣದ ಏಡಿ ಕಾಲೋನಿಯ ಆರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ರಂಗಮ್ಮ, ವೆಂಕಟ ಲಕ್ಷ್ಮಮ್ಮ, ಗುಳ್ಳಮ್ಮ, ನಂದಗೌಡ, ರಾಜ್ ಕುಮಾರ್, ಮಾಲತಮ್ಮ ಎಂಬುವರ ಮನೆಗಳಲ್ಲಿ ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಮುತ್ತೂಟ್ ಪಿನ್ ಕಾರ್ಪ್ನಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮಾಲೂರು ಪಟ್ಟಣದಲ್ಲಿ ಕಳೆದೊಂದು ತಿಂಗಳಿಂದ ಸುಮಾರು 15 ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ.
ಸ್ಥಳಕ್ಕೆ ಮಾಲೂರು ಪೊಲೀಸರು, ಬೆರಳಚ್ಚು ತಜ್ಞರು ಶ್ವಾನದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇನ್ನು ಕಳ್ಳತನ ತಡೆಗಟ್ಟುವ ಸಲುವಾಗಿ ಮನೆ ಮಾಲಿಕರು ಹೊರ ಹೋಗುವ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿ ಹೋಗಬೇಕೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.