ಕೋಲಾರ: ಮಾವು, ರೇಷ್ಮೆ, ಹಾಗೂ ಟೊಮ್ಯಾಟೋ ತವರು ಎಂದೇ ಪ್ರಸಿದ್ಧಿ ಪಡೆದ ಕೋಲಾರ ಜಿಲ್ಲೆಯಲ್ಲಿ ಇದೀಗ ನೀಲಿ ಹಣ್ಣಿನ ದರ್ಬಾರ್ ಶುರುವಾಗಿದೆ. ಈ ಮೂಲಕ ಚಿನ್ನದ ನಾಡಿನ ಪ್ರಸಿದ್ಧಿಗಳ ಸಾಲಿಗೆ ನೇರಳೆ ಹಣ್ಣು ಸಹ ಸೇರ್ಪಡೆಯಾಗಿದೆ.
ಹೌದು, ಜಿಲ್ಲೆಯಲ್ಲಿ ಕೇವಲ ಬಾರ್ಡರ್ ಕ್ರಾಪ್ ಆಗಿ ಬೆಳೆಯುತ್ತಿದ್ದ ನೇರಳೆ ಹಣ್ಣನ್ನು ಈಗ ರೈತರು ತೋಟಗಳಲ್ಲಿ ಎಕರೆಗಟ್ಟಲೆ ಒಣ ಬೇಸಾಯ ವಿಧಾನದಲ್ಲಿ ಮಾನೋ ಕ್ರಾಪ್ ಆಗಿ ಬೆಳೆಯಲು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಇಲ್ಲಿನ ರೈತರು ಸರಿಸುಮಾರು 100ಕ್ಕೂ ಹೆಚ್ಚಿನ ಪ್ರದೇಶದಲ್ಲಿ ನೇರಳೆ ಹಣ್ಣನ್ನು ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ.
ಈ ನಿಟ್ಟಿನಲ್ಲಿ ನೇರಳೆ ಬೆಳೆದಿರುವ ರೈತರು ತಮ್ಮ ನಿರೀಕ್ಷೆಗೂ ಹೆಚ್ಚಿನ ಆದಾಯ ಪಡೆಯುವ ಮೂಲಕ ಸಖತ್ ಖುಷಿಯಾಗಿದ್ದಾರೆ. ಅತಿ ಹೆಚ್ಚು ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣು ಕೆಜಿಗೆ 200-300 ರೂ. ಬೆಲೆ ಇದ್ದು, ಒಂದೇ ಸೀಸನ್ನಲ್ಲಿ ನೇರಳೆ ಹಣ್ಣು ಬೆಳೆದಿರುವ ರೈತರು ಭರ್ಜರಿ ಆದಾಯಲ್ಲಿದ್ದಾರೆ.
ಕಾಡು-ಮೇಡು, ಬೆಟ್ಟ-ಗುಡ್ಡ, ಹೊಲಗಳ ಬದುಗಳಲ್ಲಿ ಮಾತ್ರ ಬೆಳೆಯುತ್ತಿದ್ದ ನೇರಳೆ ಮರಗಳು ಇದೀಗ ರೈತರ ಪರ್ಯಾಯ ಬೆಳೆಯಾಗಿದೆ. ಎಕರೆಗಟ್ಟಲೆ ಬೆಳೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನೇರಳೆ ಹಣ್ಣನ್ನು ಕಂಡರೆ ಮೂಗು ಮುರಿಯುತ್ತಿದ್ದ ಒಂದು ಕಾಲವಿತ್ತು. ಆದ್ರೆ ಇಂದು ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿ ಮಾಡಬಲ್ಲ ಔಷಧೀಯ ಗುಣಗಳಿವೆ ಅನ್ನೋ ಮಾಹಿತಿ ಗೊತ್ತಾಗುತ್ತಿದ್ದಂತೆ ನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ.
ಕೋಲಾರದ ಗಲ್ಲಿ ಗಲ್ಲಿಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಿಂದ ದೊಡ್ಡ ದೊಡ್ಡ ಹಣ್ಣಿನ ಅಂಗಡಿಗಳಲ್ಲೂ ನೇರಳೆ ಹಣ್ಣಿನದ್ದೇ ಕಾರುಬಾರು ಶುರುವಾಗಿದೆ. ಹಾಗಾಗಿ ತೋಟಗಾರಿಕಾ ಇಲಾಖೆ ಕೂಡ ನೇರಳೆ ಹಣ್ಣನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ತಪ್ದಾಲ್ ಅನ್ನೋ ತಳಿಯನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.
ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಸಿಯಿಂದ ನಾಟಿ ಮಾಡೋವರೆಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಮಾವಿಗೆ ಪರ್ಯಾಯ ಬೆಳೆಯಾಗಿ ನೇರಳೆ ಬೆಳೆಸಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.