ಕೋಲಾರ: ಕೊರೊನಾ ಆತಂಕದ ನಡುವೆಯೂ ಜಿಲ್ಲೆಯ ಶ್ರಿನಿವಾಸಪುರದ ಮಾವಿನ ಮಾರುಕಟ್ಟೆಯನ್ನು ಆರಂಭ ಮಾಡಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಮಾರುಕಟ್ಟೆ ಮಾವಿನ ಸುಗ್ಗಿ ಕಾಲಕ್ಕೆ ಸಿದ್ಧವಾಗುತ್ತಿದೆ.
ವಿಶ್ವ ಪ್ರಸಿದ್ಧ ಮಾವಿನ ಮಾರುಕಟ್ಟೆ ಹೊಂದಿರುವ ಶ್ರೀನಿವಾಸಪುರವನ್ನು ಮಾವಿನ ತವರು ಎಂದೇ ಕರೆಯಲಾಗಿದ್ದು, ಇಲ್ಲಿ ವಿಶ್ವದಲ್ಲೇ ಉತ್ಕೃಷ್ಟ ತಳಿಯ ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಸರಾಸರಿ 45,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವ ಕಾರಣ ಈ ಮಾರುಕಟ್ಟೆಗೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದ ವ್ಯಾಪಾರಸ್ಥರು ಬರ್ತಾರೆ. ಕೊರೊನಾ ಆತಂಕದ ನಡುವೆ ಈ ವರ್ಷದ ಮಾವಿನ ಮಾರುಕಟ್ಟೆಯನ್ನು ಬಂದ್ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಮಾರುಕಟ್ಟೆಯಲ್ಲಿ ಸೋಂಕು ಹೆಚ್ಚಾಗಿ ಹರಡುತ್ತೆ ಅನ್ನೋ ಕಾರಣಕ್ಕೆ ಆನ್ಲೈನ್ ಮಾರುಕಟ್ಟೆಗೆ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು. ಹೀಗಿದ್ರೂ ಮಾವು ಬೆಳೆಗಾರರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡು ಮಾರುಕಟ್ಟೆ ಆರಂಭ ಮಾಡಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ.
ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಬಹು ವಿಸ್ತಾರ ಹೊಂದಿರುವ ಮಾರುಕಟ್ಟೆಯಾಗಿದ್ದು, ಹೆಚ್ಚಾಗಿ ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ದೆಹಲಿ, ಪಂಜಾಬ್ ಹೀಗೆ ದೇಶದ ಬಹುತೇಕ ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಅಷ್ಟೇ ಅಲ್ಲದೆ ಮಾವಿನ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಕೂಡಾ ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಬರ್ತಾರೆ. ಹಾಗಾಗಿ ಅವರಿಂದ ಸೋಂಕು ಹರುಡುವ ಸಾಧ್ಯತೆ ಹೆಚ್ಚಿರುವ ಕಾರಣ ಹೊರ ರಾಜ್ಯದ ಕಾರ್ಮಿಕರನ್ನು ಬಳಸಿಕೊಳ್ಳದೆ ಸ್ಥಳೀಯರನ್ನ ಬಳಕೆ ಮಾಡಿಕೊಳ್ಳಲಾಗುತ್ತದೆ. ಹೊರ ರಾಜ್ಯದಿಂದ ಬರುವ ಲಾರಿ ಡ್ರೈವರ್ಗಳು ಮತ್ತು ಕ್ಲೀನರ್ಗಳಿಗೆ, ವ್ಯಾಪಾರಸ್ಥರಿಗೆ ಊಟ, ತಿಂಡಿ ವ್ಯವಸ್ಥೆ ಮತ್ತು ಲಾರಿಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗುತ್ತದೆ.
ಮಾರುಕಟ್ಟೆಯಲ್ಲೂ ಜನಜಂಗುಳಿಯಾಗದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ. ಅದಕ್ಕಾಗಿ ಎಸ್ಪಿ ಹಾಗೂ ಮಾರುಕಟ್ಟೆ ಸಮಿತಿ ಸದಸ್ಯರು ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ.