ಕೋಲಾರ: ನಿನ್ನೆ ಸಂಜೆ ತಾಲೂಕಿನ ದಿಂಬ ಹಾಗು ದೊಡ್ಡಹಸಾಳ ಗ್ರಾಮಗಳ ರಸ್ತೆ ಬದಿಯಲ್ಲಿ ಗುಂಪು-ಗುಂಪಾಗಿ ಮಿಡತೆಗಳು ಕಂಡು ಬಂದಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಕೆಲ ಜಾತಿಯ ಮಿಡತೆಗಳು ಉತ್ತರ ಭಾರತದ ರೈತರನ್ನು ಕಂಗಾಲಾಗಿಸಿವೆ. ಅವು ಬೆಳೆಗಳನ್ನು ಹಾಳು ಮಾಡುತ್ತಿದ್ದು, ಅಲ್ಲಿನ ರೈತರು ಸಂಕಷ್ಟಕ್ಕೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲೂ ಮಿಡತೆಗಳು ಕಂಡುಬಂದಿರುವುದು ಜನರ ನಿದ್ದೆಗೆಡಿಸಿದೆ.
ದಿಂಬ ಹಾಗು ದೊಡ್ಡಹಸಾಳ ಗ್ರಾಮಗಳ ರಸ್ತೆ ಬದಿಯಲ್ಲಿ ಗುಂಪು ಗುಂಪಾಗಿ ಮಿಡತೆಗಳು ಕಂಡು ಬಂದಿದ್ದು, ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಮಿಡತೆಗಳ ಹಾವಳಿಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದರು. ಈ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು, ಇವು ಹೆಚ್ಚಾಗಿ ಎಕ್ಕದ ಗಿಡದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮಿಡತೆಗಳಾಗಿವೆ. ಇದರಿಂದ ಬೆಳೆಗಳಿಗೆ ಯಾವುದೇ ರೀತಿ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.
ಉತ್ತರ ಭಾರತದಲ್ಲಿ ಕಂಡು ಬಂದ ಮಿಡತೆಗಳಿಗೂ ಹಾಗು ಕೋಲಾರದಲ್ಲಿ ಕಂಡು ಬಂದ ಮಿಡತೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.
ಕೆವಿಕೆ ವಿಜ್ಞಾನಿಗಳ ತಂಡ ಹಾಗೂ ಕೇಂದ್ರ ಐಪಿಎಂ ವಿಜ್ಞಾನಿಗಳ ತಂಡ ಪರಿಶೀಲಿಸಿದ್ದು, ಇವು ಕ್ಯಾಲೋಟ್ರೋಫಿಸ್ ಗ್ರಾಸೋಫರ್ ಮಿಡತೆಗಳಾಗಿದ್ದು, ಇವುಗಳಿಂದ ರೈತರ ಬೆಳೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ. ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆಗಳಿಗೂ ಜಿಲ್ಲೆಯಲ್ಲಿ ಕಂಡುಬಂದ ಮಿಡತೆಗಳಿಗೂ ಯಾವುದೇ ಸಂಬಂಧವಿಲ್ಲದ ಕಾರಣ ರೈತರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲವೆಂದು ಹೇಳಿದರು. ಜೊತೆಗೆ ಮಿಡತೆಗಳು ಕಂಡು ಬಂದ ಗಿಡವನ್ನು ಸುಟ್ಟುಹಾಕಿ, ಔಷಧಿಗಳನ್ನ ಸಿಂಪಡಣೆ ಮಾಡಲಾಗಿದೆ ಎಂದರು. ಇದರಿಂದ ಜಿಲ್ಲೆಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.