ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಎಸ್ಬಿಐ ಬ್ಯಾಂಕ್ ಎದುರು ಬ್ಯಾಂಕ್ ತೆರೆಯುವ ಮುನ್ನವೇ ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಲು ಬಿಸಿಲಿನಲ್ಲೇ ಸಾಲುಗಟ್ಟಿ ಕಾದು ನಿಂತ ದೃಶ್ಯ ಕಂಡು ಬಂತು.
ಆನ್ಲೈನ್ನಲ್ಲಿ ಹಣ ಪಾವತಿಗೆ ಅವಕಾಶವಿದ್ದರೂ ಕಾಲೇಜು ಅದಕ್ಕೆ ಅವಕಾಶ ನೀಡದ ಪರಿಣಾಮ ಪ್ರತಿನಿತ್ಯ ನೂರಾರು ಮಕ್ಕಳು ಬ್ಯಾಂಕ್ ಎದುರು ಸರದಿ ಸಾಲಿನಲ್ಲಿ ನಿಂತು ಹಣ ಪಾವತಿ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೋವಿಡ್ ಸಂದರ್ಭವಾದ್ದರಿಂದ ಮಕ್ಕಳ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಬಂಗಾರಪೇಟೆ ಕಾಲೇಜು ವಿದ್ಯಾರ್ಥಿಗಳನ್ನು ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಿಸಿ ಎಡವಟ್ಟಿಗೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹರಡುವ ಆತಂಕ ಕೂಡಾ ಎದುರಾಗಿದೆ.