ಕೋಲಾರ : ಖಾತೆ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ರೈತ ಮಹಿಳೆಯಿಂದ ಲಂಚ ಸ್ವೀಕರಿಸಿ ಕೆಲಸ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಅಧಿಕಾರಿಗೆ ರೈತ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಮುತ್ತಿಗೆ ಹಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೆಜಿಎಫ್ ತಾಲೂಕು ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ತಾಲೂಕಿನ ಎನ್.ಜಿ.ಹುಲ್ಕೂರು ಗ್ರಾಮದ ಮುನಿರತ್ನಮ್ಮ ಎಂಬ ರೈತ ಮಹಿಳೆಯ ಕುಟುಂಬಸ್ಥರಿಗೆ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಅಧಿಕಾರಿ, ಮಂಜುಳಮ್ಮ ಎಂಬುವವರಿಂದ ಒಂದು ಸಾವಿರ ಹಣ ಪಡೆದಿದ್ದರು ಎನ್ನಲಾಗಿದೆ. ಅಲ್ಲದೇ ಕೆಲಸ ಮಾಡಿಕೊಡದೇ ಉಡಾಫೆ ಉತ್ತರವನ್ನ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಮಹಿಳೆ ತಾಲೂಕು ಕಚೇರಿಯಲ್ಲಿ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಖಾತೆ ಬದಲಾವಣೆ ಮಾಡಿಕೊಡುವುದಾಗಿ ಒಂದು ಸಾವಿರ ಲಂಚ ಪಡೆದಿದ್ದಾರೆಂದು ಆರೋಪಿಸಿದ್ದಾರೆ. ಇನ್ನು ಕಣ್ಣೀರು ಆಕ್ರೋಶಕ್ಕೆ ಬೆದರಿದ ತಾಲೂಕು ಕಚೇರಿಯ ಸಿಬ್ಬಂದಿ ಖಾತೆ ಬದಲಾವಣೆ ಮಾಡಿಕೊಡುವುದಾಗಿ ರೈತ ಮಹಿಳೆಗೆ ಭರವಸೆ ನೀಡಿದ್ದಾರೆ.