ಕೋಲಾರ: ಮೈತ್ರಿ ಸರ್ಕಾರ ಬೀಳಲು ಹಾಗೂ ಬಿಜೆಪಿ ಲೋಕಸಭೆ ಅಭ್ಯರ್ಥಿ ಗೆಲ್ಲಲು ನಾನು ಕಾರಣ ಎಂಬ ಆರೋಪ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ನನ್ನ ವಯಸ್ಸು, ನಾನು ಯಾವ ಸ್ಥಾನದಲ್ಲಿ ಕೂತಿದ್ದೆ ಅದನ್ನ ನನ್ನ ಉಸಿರು ಇರುವ ವರೆಗೂ ಕಾಪಾಡಿಕೊಳ್ಳುತ್ತೇನೆ, ಆತ್ಮ ಸಾಕ್ಷಿಗೆ ಅನುಗುಣವಾಗಿ, ಸಂವಿಧಾನದ ನಿಯಮಗಳಿಗೆ ಗೌರವ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ತಾಲೂಕಿನ ಅಣ್ಣಿಹಳ್ಳಿಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನಿಂದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಅವಿಶ್ವಾಸ ನಿರ್ಣಯದ ವೇಳೆ ಸರ್ಕಾರ ಉರುಳಿಸಲು ಚೀಟಿ ಬರೆದುಕೊಟ್ಟಿದ್ದಾರೆ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಕೋಲಾರದಲ್ಲಿ ಬಿಜೆಪಿ ಲೋಕಸಭೆ ಅಭ್ಯರ್ಥಿ ಗೆಲ್ಲಲು ರಮೇಶ್ ಕುಮಾರ್ ಕಾರಣ ಎಂದು ಆರೋಪ ಮಾಡಿದ್ದರ ಕುರಿತು ಉತ್ತರಿಸಿದ ಅವರು, ಆಯ್ತು, ನನಗೆ ಸಂತೋಷ, ನಾನು ಯಾವುದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.
ದೇವೇಗೌಡ ಅವರು ನನಗಿಂತ ದೊಡ್ಡವರು ಅವರ ಆಶೀರ್ವಾದ ನನ್ನ ಮೇಲಿರಲಿ, ಕುಮಾರಸ್ವಾಮಿ ಅವರು ನನಗಿಂತ ಚಿಕ್ಕವರು ಅವರಿಗೆ ನನ್ನ ಆಶೀರ್ವಾದವಿರುತ್ತೆ ಎಂದು ಹೇಳಿದ್ದು, ರಾಜ್ಯದಲ್ಲಿ ಇಷ್ಟೊಂದು ನೆರೆ ಬಂದಿದೆ, ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ, ಸಾವಿರಾರು ಜನರಿಗೆ ಕುಡಿಯಲು ನೀರಿಲ್ಲ, ನನ್ನ ಆಯುಷ್ಯ ಇರುವ ವರೆಗೂ ನಾನು ಜನರ ಉಳಿವಿಗಾಗಿ ಕೆಲಸ ಮಾಡುತ್ತೇನೆ ಎಂದರು.
ಸರ್ಕಾರ ಪತನದ ನಂತರ ಜೆಡಿಎಸ್ ನಾಯಕರು ತನ್ನ ವರಸೆ ಬದಲಾಯಿಸಿದ್ದಾರೆ. ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ದೊಡ್ಡವರ ಆಶೀರ್ವಾದ ನಮ್ಮ ಮೇಲಿರಲಿ, ಚಿಕ್ಕವರ ಆಶೀರ್ವಾದ ನಮ್ಮದಿರುತ್ತೆ ಎಂದರು. ಇನ್ನೂ ವಿರೋಧ ಪಕ್ಷದ ಸ್ಥಾನದ ಬಗ್ಗೆಯೂ ನನಗೆ ಗೊತ್ತಿಲ್ಲ, ಸಿದ್ದರಾಮಯ್ಯ ಅವರ ಸ್ಥಾನವೇ ಬೇರೆ, ಅವರು ಅನುಭವಿ ಹಾಗಾಗಿ ನಾನು ಯಾವುದೇ ವಿಚಾರವನ್ನ ಮಾತಾನಾಡುವುದಿಲ್ಲ. ನನ್ನ ನಡೆ ನುಡಿ ಎಲ್ಲವೂ ಭಯದಿಂದಲೆ ಇರುತ್ತೆ ಎಂದಿದ್ದಾರೆ.