ಕೋಲಾರ: ದಶಕಗಳ ಕಾಲದಿಂದ ವಿವಾದಿತ ವಿಷಯವಾಗಿದ್ದ ರಸ್ತೆ ಅಗಲೀಕರಣ ಸದ್ಯ ಸಮಾಪ್ತಿ ಕಂಡಿದೆ. ಹತ್ತಾರು ವರ್ಷಗಳ ಹೋರಾಟಕ್ಕೆ ಇದೀಗ ಫಲಸಿಕ್ಕಂತಾಗಿದೆ. ಹೈಕೋರ್ಟ್ನ ಆದೇಶದಂತೆ ಇಂದು ಜಿಲ್ಲಾಡಳಿತ ಜೆಸಿಬಿಗಳ ಮುಖಾಂತರ ರಸ್ತೆ ಅಗಲೀಕರಣಕ್ಕೆ ನಾಂದಿಹಾಡಿದೆ.
ಇಂದು ಬೆಳಗ್ಗೆ ನಗರದ ಕೆಜಿಎಫ್ನಲ್ಲಿ ಪೊಲೀಸ್ ವಾಹನಗಳು ಸುತ್ತುವರೆದು ಜೆಸಿಬಿಗಳು ರಸ್ತೆಗಿಳಿದಿದ್ದವು. ಪೊಲೀಸ್ ಸರ್ಪಗಾವಲಿನಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯ ಆರಂಭಿಸಿದ್ದು, ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಅಶೋಕ ನಗರ ರಸ್ತೆ ಕಾಮಗಾರಿಗೆ ಮರುಜೀವ ಬಂದಿದೆ.
ರಸ್ತೆ ಅಗಲೀಕರಣ ಸಂಬಂಧ ಸುಮಾರು 12 ವರ್ಷಗಳಿಂದ ತೆರವು ಕಾರ್ಯ ನಡೆಯದೆ ವಿವಾದ ಸೃಷ್ಟಿಯಾಗಿದ್ದ ರಸ್ತೆ ಇದಾಗಿದ್ದು, 4 ಜೆಸಿಬಿಗಳ ಮೂಲಕ ನೂರಾರು ಪೊಲೀಸರ ಸಮ್ಮುಖದಲ್ಲಿ ಕಾರ್ಯಚರಣೆ ನಡೆಯಿತು.
ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಎಸ್.ಮುನಿಸ್ವಾಮಿ ಸ್ಥಳಿಯರೊಂದಿಗೆ ಮಾತುಕತೆ ನಡೆಸಿ ರಸ್ತೆ ಅಭಿವೃದ್ದಿಗೆ ಸಹಕರಿಸುವಂತೆ ಮನವೊಲಿಸಿದರು. ಇದೆ ವೇಳೆ ಮಾತನಾಡಿದ ಅವರು, ಹಿಂದಿನ ಸಂಸದರ ರಾಜಕೀಯ ಸ್ವಪ್ರತಿಷ್ಠೆಯಿಂದ ರಸ್ತೆ ಅಭಿವೃದ್ಧಿಯಾಗಿಲ್ಲ, ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದರು ಹಾಗಾಗಿ ರಸ್ತೆ ಅಭಿವೃದ್ದಿಯಾಗಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದರಲ್ಲದೆ ಬಿಜೆಪಿ ಸರ್ಕಾರ ಇದ್ದ ಕಾರಣ ಇಷ್ಟೆಲ್ಲಾ ಅಭಿವೃದ್ಧಿಯಾಗುತ್ತಿದೆ ಎಂದುರು.
ಏಕಾಂಗಿ ಹೋರಾಟ ಮಾಡಿದ್ದ ಶಾಸಕಿ ರೂಪ ಶಶಿಧರ್
ಇನ್ನೂ ರಸ್ತೆ ಅಗಲೀಕರಣ ಸಂಬಂಧ ಈ ಹಿಂದೆ 2011ರಲ್ಲಿ ಅಂದಿನ ಬಿಜೆಪಿ ಶಾಸಕ ವೈ.ಸಂಪಂಗಿ ತೆರವು ಕಾರ್ಯಕ್ಕೆ ಮುಂದಾದ ವೇಳೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿತ್ತು. ಅದಾದ ಬಳಿಕ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಪ್ರಕರಣ ಇತ್ಯರ್ಥವಾಗಿತ್ತು, ಹಾಗಾಗಿ ರಸ್ತೆ ಅಗಲೀಕರಣ ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಕೆಜಿಎಫ್ ಶಾಸಕಿ ರೂಪಕಲಾ ಏಕಾಂಗಿ ಮೌನ ಪ್ರತಿಭಟನೆ ಕೂಡ ಮಾಡಿದ್ದರು.
ಹೈಕೋರ್ಟ್ ಆದೇಶವಿದ್ದರೂ 8 ತಿಂಗಳಿಂದ ಕಾಮಗಾರಿ ಮಾಡದಕ್ಕೆ ಶಾಸಕಿ ರೂಪ ಶಶಿಧರ್ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಜಿಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತಲ್ಲದೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಇಂದು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ನೂರಾರು ಪೊಲೀಸರು ನಗರಕ್ಕೆ ನಾಕಾಬಂಧಿ ಹಾಕುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು. ಇದೆ ವೇಳೆ ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್, ತಹಶೀಲ್ದಾರ್ ಕೆ.ರಮೇಶ್, ನಗರಸಭೆ ಪೌರಾಯುಕ್ತ ರಾಜು, ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್ ಸ್ಥಳದಲ್ಲಿದ್ದರು.