ಕೋಲಾರ: ಹೆಣ್ಣು ಮಗುವಾಯಿತೆಂದು ಮನನೊಂದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಲೋಕೇಶ್ ಎಂದು ಗುರುತಿಸಲಾಗಿದೆ.
ಶೆಟ್ಟಿಹಳ್ಳಿ ಗ್ರಾಮದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಲೋಕೇಶ್‌ಗೆ ಕಳೆದ ಎಂಟು ವರ್ಷಗಳ ಹಿಂದೆ ಆಂಧ್ರಪ್ರದೇಶದ ಪುಂಗನೂರಿನ ಸಿರಿಶಾ ಜತೆ ಮದುವೆ ಮಾಡಲಾಗಿತ್ತು. ದಂಪತಿಗೆ ಎರಡು ವರ್ಷಗಳ ಅಂತರದಲ್ಲಿ ಮೂರು ಹೆಣ್ಣುಮಕ್ಕಳಾಗಿವೆ. ಇದರಿಂದ ಆತನಿಗೆ ತನಗೆ ಗಂಡು ಮಕ್ಕಳಾಗಿಲ್ಲ ಎಂಬ ಕೊರಗಿತ್ತಂತೆ.
ಕಳೆದ ನವೆಂಬರ್ 4 ರಂದು ಲೋಕೇಶ್ ಪತ್ನಿಗೆ ಮತ್ತೆ ನಾಲ್ಕನೇ ಹೆಣ್ಣು ಮಗುವಾಗಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಆತ ತನ್ನ ತಾಯಿಯನ್ನು ತಮ್ಮನ ಮನೆಗೆ ಕಳುಹಿಸಿ ತಾನೊಬ್ಬನೇ ಮನೆಯಲ್ಲಿ ಮಲಗಿದ್ದಾನೆ. ಅಂದೇ ಮಧ್ಯರಾತ್ರಿಯ ಸುಮಾರಿಗೆ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂದು ಬೆಳಿಗ್ಗೆ ಲೋಕೇಶನ ತಾಯಿ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆಗೆ ಮಾಡಿಕೊಂಡಿರುವುದು ತಿಳಿದುಬಂದಿದೆ. ತಕ್ಷಣ ತನ್ನ ಇನ್ನೊಬ್ಬ ಮಗ ಮಂಜುನಾಥ್ನಿಗೆ ವಿಚಾರ ಮುಟ್ಟಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಸ್ಥಳಕ್ಕೆ ಆಗಮಿಸಿದ ಶ್ರೀನಿವಾಸಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮೈಸೂರು: ಪ್ರೀತಿಸಿ ಮದುವೆ... 5 ತಿಂಗಳಲ್ಲೇ ಪ್ರೇಮಿಗಳ ಬದುಕು ಅಂತ್ಯ