ಕೋಲಾರ: ದೇಶಾದ್ಯಂತ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದಾರೆ. ಈ ನಡುವೆ ಸಿಎಂ ಯಡಿಯೂರಪ್ಪ ಅವರ ಸರ್ಕಾರ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದ್ರೆ, ರಾಜ್ಯ ಸರ್ಕಾರವೇ ಹೊಣೆ ಎಂದು ಒಪ್ಪಿಕೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಅಟ್ಟಹಾಸದ ನಡುವೆ ಹಠಕ್ಕೆ ಬಿದ್ದು ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದ್ರೆ ರಾಜ್ಯ ಸರ್ಕಾರವೇ ಕಾರಣ ಅಂತ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳನ್ನ ತರಲು ಕೇಂದ್ರ ಸರ್ಕಾರ ಸಂಚು ಮಾಡುತ್ತಿದ್ದು, ಬಿತ್ತನೆ ಬೀಜವನ್ನ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿದೆ ಎಂದು ಆರೋಪಿಸಿದರು. ಭೂ ಸುಧಾರಣಾ ಕಾಯ್ದೆ ತಂದು ರೈತರನ್ನು ಕೃಷಿಯಿಂದ ವಿಮುಕ್ತಿಗೊಳಿಸಲು ಸರ್ಕಾರ ಹುನ್ನಾರ ನಡೆಸಿದೆ. ಅಲ್ಲದೇ, ಕೇಂದ್ರ ಸರ್ಕಾರವು ದೇಶವನ್ನು ವಿದೇಶಿಯರಿಗೆ ಒಪ್ಪಿಸಲು ಮುಂದಾಗಿದೆ. ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಈಗ ರೈತರನ್ನೇ ಮಾರಾಟ ಮಾಡಲು ಹೊರಟಿದ್ದಾರೆ ಎಂದು ಕೋಡಿಹಳ್ಳಿ ಗುಡುಗಿದ್ರು.