ಕೋಲಾರ : ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಕೋಲಾರ ನಗರದ ಖಾಸಗಿ ಆಸ್ಪತ್ರೆ ಸುಗಟೂರು ಗ್ರಾಮದ 38 ವರ್ಷದ ಕದಿರಪ್ಪ ಎಂಬವರು ದಾಖಲಾಗಿದ್ದರು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕದಿರಪ್ಪ ಅವರನ್ನು, ಸ್ನೇಹಿತರು ಇಂದು ಮುಂಜಾನೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಹಿನ್ನೆಲೆ, ಅಲ್ಲಿನ ಸಿಬ್ಬಂದಿ ಮೊದಲಿಗೆ ಬಿಪಿ ಚೆಕ್ ಮಾಡಿ, ನಂತರ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದರು. ವೈದ್ಯರು ಇಂಜೆಕ್ಷನ್ ನೀಡುವಂತೆ ತಿಳಿಸಿದ್ದಾರೆ, ವೈದ್ಯರ ಸಲಹೆಯಂತೆ ಸಿಬ್ಬಂದಿ ಇಂಜೆಕ್ಷನ್ ನೀಡುತ್ತಿದ್ದಂತೆ ಕದಿರಪ್ಪ ಮೃತಪಟ್ಟಿದ್ದಾರೆ.
ಓದಿ : ಕಲಬುರಗಿ: ನೇಣು ಬಿಗಿದುಕೊಂಡು ಅಕ್ಕ ತಂಗಿ ಆತ್ಮಹತ್ಯೆ
ಕದಿರಪ್ಪ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ಆಸ್ಪತ್ರೆಯ ಗಾಜುಗಳನ್ನು ಪುಡಿಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವೈದ್ಯರನ್ನು ಬಂಧಿಸಿ, ಆಸ್ಪತ್ರೆ ವಿರುದ್ದ ಕ್ರಮ ಕೈಗೊಳ್ಳುವಂತೆ ಮತ್ತು ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಬರುವಂತೆ ಒತ್ತಾಯಿಸಿ, ಮೃತ ದೇಹವನ್ನಿಟ್ಟು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.