ಕೋಲಾರ: ಕೆಆರ್‌ಎಸ್ ಡ್ಯಾಂಗೆ ಕಲ್ಲು ಹೊಡೆಯುವ ಕೆಲಸ ಮಾಡದಂತೆ ಸಂಸದೆ ಸುಮಾಲತಾಗೆ ರಾಜ್ಯ ಯುವ ಜನತಾದಳ (ಜಾತ್ಯತೀತ)ದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಮುಳಬಾಗಿಲಿನಲ್ಲಿ ಹಾಲು ಉತ್ಪಾದಕರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರ ಜೊತೆಗೆ ಮಾತನಾಡಿದರು.
ಕೆಆರ್ಎಸ್ ಡ್ಯಾಂಗೆ ತನ್ನದೇ ಆದ ಇತಿಹಾಸವಿದೆ. ಮೀಡಿಯಾ ಮುಂದೆ ಪೋಸ್‌ಗಾಗಿ ಮಂಡ್ಯದ ಜನತೆಯಲ್ಲಿ ಆತಂಕ ಸೃಷ್ಟಿಸಬೇಡಿ. ಡ್ಯಾಂ ಬಿರುಕು ಬಿಟ್ಟಿದ್ದರೆ ಟೆಕ್ನಿಕಲ್ ಟೀಂ ಇದೆ. ಸರ್ಕಾರ ಅದರ ಬಗ್ಗೆ ಉತ್ತರಕೊಡುತ್ತೆ. ಈ ರೀತಿ ಗೊಂದಲ ಸೃಷ್ಟಿಸೋದಲ್ಲ ಎಂದು ಹೇಳಿದರು.
ಎಲ್ಲಿ ಭ್ರಷ್ಟಾಚಾರ ಇರುತ್ತೋ ಅಲ್ಲಿ ಹೆಚ್ಡಿಕೆ ಇರ್ತಾರೆ ಅನ್ನೋ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸುಮಲತಾಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ. ಜೆಡಿಎಸ್ ಪಕ್ಷ, ಕುಮಾರಸ್ವಾಮಿ, ದೇವೇಗೌಡರು, ರಾಜ್ಯದ ಸಂಪತ್ತನ್ನು ಉಳಿಸುವ ಕೆಲಸ ಮಾಡಿದ್ದೇವೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
'ಪೊಲಿಟಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ'
ಪ್ರಜ್ವಲ್ ರೇವಣ್ಣರನ್ನು ಸುಮಲತ ಹೊಗಳಿಕೆ ವಿಚಾರವಾಗಿ ಮಾತನಾಡುತ್ತಾ, ನನ್ನ ತಮ್ಮನ ಬಗ್ಗೆ ಸುಮಲತಾ ಪೊಲಿಟಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅದಕ್ಕೆ ಅಭಿನಂದನೆ. ನನಗೆ ಸಂತೋಷವಾಗಿದೆ ಎಂದರು.
ಮಂಡ್ಯದ ಸಂಸದರನ್ನಾಗಿ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಜನರ ಋಣ ತೀರಿಸಿಕೊಳ್ಳುವ ಕೆಲಸ ಮಾಡಿ, ಈ ರೀತಿಯ ವೈಯಕ್ತಿಕ ಕಲ್ಲೆರಚಾಟ ಮಾಡಿಕೊಂಡು ಟೀಕೆ ಮಾಡುವುದು ಬೇಡ. ನಾನು ಮಂಡ್ಯದ ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಸೋಲು ಒಪ್ಪಿಕೊಂಡಿದ್ದೇನೆ, ಆದರೆ ಐದುಮುಕ್ಕಾಲು ಲಕ್ಷ ಜನ ಮತ ಹಾಕಿದ್ದಾರೆ, ಬೇಜಾರಿಲ್ಲ. ಆದರೆ ಅವರು ಸಂಸದರಾಗಿದ್ದಾರೆ. ಜನರ ಋಣ ತೀರಿಸುವ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ವಿಫಲಗೊಂಡಿದ್ದರೆ ಅದಕ್ಕೆ ನೇರ ಹೊಣೆ ನರೇಂದ್ರ ಮೋದಿ: ಸಿದ್ದರಾಮಯ್ಯ