ಅದಾನಿ ಹೆಸರು ಪ್ರಸ್ತಾಪಿಸಿ ಕೋಲಾರದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ - ಅದಾನಿ ಗ್ರೂಪ್
ಕೋಲಾರದಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಹಳೆ ಮೊಳಗಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದಾನಿ ವಿಷಯ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೋಲಾರ: ಉದ್ಯಮಿ ಗೌತಮ್ ಅದಾನಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರಕ್ಕೆ ನಾನು ಹೆದರುವುದಿಲ್ಲ ಎಂದು ಪುನರುಚ್ಚರಿಸಿದರು. ಅದಾನಿ ಭ್ರಷ್ಟಾಚಾರದ ಸಂಕೇತ ಎಂದೂ ಆರೋಪಿಸಿದರು.
ಕೋಲಾರದಲ್ಲಿ 2019ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ, ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸಿದ್ದ ಕೈ ನಾಯಕ, ಕಳೆದ ತಿಂಗಳು ಸೂರತ್ ನ್ಯಾಯಾಲಯದಿಂದ ದೋಷಿ ಎಂದು ಸಾಬೀತಾಗಿದ್ದರು. ಅಲ್ಲದೇ, 2 ವರ್ಷದ ಜೈಲು ಶಿಕ್ಷೆ ಪ್ರಕಟವಾಗಿ ಸಂಸತ್ ಸದಸ್ಯ ಸ್ಥಾನದಿಂದಲೂ ಅನರ್ಹಗೊಂಡಿದ್ದಾರೆ.
ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದು, ಈ ಹಿಂದೆ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕೋಲಾರದಿಂದಲೇ ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಅಲ್ಲದೇ, ಅದಾನಿ ವಿಷಯ ಪ್ರಸ್ತಾಪಿಸಿ ಪ್ರಧಾನಿ ಮೋದಿ ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ಮಾಡಿದರು.
ನಾನು ಹೆದರುವವನಲ್ಲ - ರಾಹುಲ್: ''ಪ್ರಧಾನಿ ಮೋದಿ ಮತ್ತು ಅದಾನಿ ಸಂಬಂಧದ ಬಗ್ಗೆ ಪ್ರಶ್ನಿಸಿದ ಕಾರಣ ನನ್ನನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ. ಅವರು (ಕೇಂದ್ರ ಸರ್ಕಾರ) ನನ್ನನ್ನು ಸಂಸತ್ತಿನಿಂದ ತೆಗೆದುಹಾಕಿ ಮತ್ತು ನನಗೆ ಬೆದರಿಸುವ ಮೂಲಕ ನನ್ನನ್ನು ಹೆದರಿಸಬಹುದು ಎಂದು ಭಾವಿಸಿದ್ದಾರೆ. ನಾನು ಹೆದರುವವನಲ್ಲ. ನನಗೆ ಉತ್ತರ ಸಿಗುವವರೆಗೂ ನಾನು ಈ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತೇನೆ. ನೀವು ನನ್ನನ್ನು ಅನರ್ಹಗೊಳಿಸಿ ಅಥವಾ ಜೈಲಿಗೆ ಹಾಕಿ ಅಥವಾ ನಿಮಗೆ ಬೇಕಾದುದನ್ನು ಮಾಡಿ'' ಎಂದು ಗುಡುಗಿದರು.
''ರಕ್ಷಣಾ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ನ ಸಂಸ್ಥೆಗಳ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದ ರಾಹುಲ್, ಗ್ರೂಪ್‌ನ ಮುಖ್ಯಸ್ಥರಾದ ಅದಾನಿ ಚೀನಾದ ವ್ಯಕ್ತಿಯನ್ನು ತಮ್ಮ ಶೆಲ್ ಕಂಪನಿಯಲ್ಲಿ ನೇಮಿಸಿಕೊಂಡಿದ್ದಾರೆ. ಅದಾನಿ ಭ್ರಷ್ಟಾಚಾರದ ಸಂಕೇತ'' ಎಂದು ದೂರಿದರು.
''ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳ ಬಯಸುತ್ತೇನೆ. ಭಾರತದಲ್ಲಿ ವಿಮಾನ ನಿಲ್ದಾಣಗಳನ್ನು ನೀಡುತ್ತಿರುವ ಅದಾನಿಯೊಂದಿಗೆ ನಿಮ್ಮ ಸಂಬಂಧವೇನು?. ಅವರಿಗೆ ಗುತ್ತಿಗೆ ನೀಡಲು ಏಕೆ ನಿಯಮಗಳನ್ನು ಬದಲಾಯಿಸಲಾಗುತ್ತಿದೆ?. ವಿಮಾನ ನಿಲ್ದಾಣಗಳನ್ನು ನಡೆಸಲು ಅದಾನಿ ಗ್ರೂಪ್‌ಗೆ ಯಾವುದೇ ಪರಿಣತಿ ಇಲ್ಲ. ಅವುಗಳನ್ನು ನಿರ್ವಹಿಸಲು ಪೂರ್ವಾಪೇಕ್ಷಿತವಾಗಿ ಹಸ್ತಾಂತರಿಸಲಾಗಿದೆ" ಎಂದು ಆರೋಪಿಸಿದರು.
''ಆಸ್ಟ್ರೇಲಿಯಾದಲ್ಲಿ ನರೇಂದ್ರ ಮೋದಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ಪಕ್ಕದಲ್ಲಿ ಗೌತಮ್ ಅದಾನಿ ಕಾಣಿಸಿಕೊಂಡಿದ್ದರು. ಇದರ ಮರು ದಿನವೇ ಎಸ್‌ಬಿಐ ಅದಾನಿಗೆ ಸಾಲವನ್ನು ನೀಡಿತು. ಶ್ರೀಲಂಕಾದಲ್ಲಿ ಅದಾನಿಗೆ ಸಹಾಯ ಮಾಡುವಂತೆ ಮೋದಿ ಅಲ್ಲಿನ ಅಧಿಕಾರಿಗಳಿಗೆ ಹೇಳಿದ್ದರು. ಇದನ್ನು ಅದೇ ರಾಷ್ಟ್ರದ ಅಧ್ಯಕ್ಷರು ಮತ್ತು ಅಲ್ಲಿನ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರು ಬಹಿರಂಗ ಪಡಿಸಿದ್ದಾರೆ. ಅದೇ ರೀತಿಯಾಗಿ ಪ್ರಧಾನಿ ಬಾಂಗ್ಲಾದೇಶಕ್ಕೆ ಹೋದಾಗಲೂ ಅದಾನಿಗೆ ಲಾಭವಾಗಿದೆ. ಪ್ರಧಾನಿ ಇಸ್ರೇಲ್ಗೆ ಹೋದಾಗ ಅಲ್ಲಿ ಅದಾನಿ ಸಿಮೆಂಟ್ ಮತ್ತು ವಿಮಾನ ನಿಲ್ದಾಣದ ಗುತ್ತಿಗೆಗಳನ್ನು ಪಡೆಯುತ್ತಾರೆ. ಅಲ್ಲದೇ, ಅದಾನಿಯವರ ಶೆಲ್ ಕಂಪನಿಗಳಿಗೆ ಸೇರಿದ 20,000 ಕೋಟಿ ರೂಪಾಯಿ ಯಾರ ಹಣ ಎಂದು ನಾವು ತಿಳಿಯಲು ಬಯಸುತ್ತೇವೆ. ಇಂತಹ ಪ್ರಶ್ನೆಗಳನ್ನು ಎತ್ತಿದಾಗ ಆಡಳಿತ ಪಕ್ಷವು ಸಂಸತ್ತು ನಡೆಯಲು ಅವಕಾಶವೇ ನೀಡಲಿಲ್ಲ'' ಎಂದು ರಾಹುಲ್ ದೂರಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಅಧಿಕಾರ, ಮೊದಲ ಸಂಪುಟ ಸಭೆಯಲ್ಲೇ ಭರವಸೆ ಈಡೇರಿಕೆ: ರಾಹುಲ್ ಗಾಂಧಿ