ಕೋಲಾರ : ಕೆಜಿಎಫ್ ಎಂದಾಕ್ಷಣ ಎಲ್ಲರ ಮನಸ್ಸಿಗೆ ಬರೋದು ಅದೊಂದು ಚಿನ್ನದ ಗಣಿ. ಆದರೆ, ಆ ಗಣಿಯಿಂದಲೇ ಅಲ್ಲೊಂದು ಪಾತಕ ಲೋಕ ಹುಟ್ಟಿಕೊಂಡಿತು ಅನ್ನೋದು ಬಹುಶಃ ಎಷ್ಟೋ ಮಂದಿಗೆ ತಿಳಿದಿಲ್ಲ. ಆ ಪಾತಕ ಲೋಕದಲ್ಲಿ ಅದೆಷ್ಟೋ ಜನ ನೆತ್ತರು ಹರಿಸುವ ಮೂಲಕ ಕೆಜಿಎಫ್ ಹೆಸರನ್ನ ಅಂಡರ್ ವರ್ಲ್ಡ್ನಲ್ಲಿ ರಾರಾಜಿಸುವಂತೆ ಮಾಡಿದ್ದರು. ಈಗಲೂ ಅಲ್ಲಿ ನಡೆಯುವ ಕೆಲ ಘಟನೆ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ.
ಈ ವಿಡಿಯೋದಲ್ಲಿ ಯುವಕನೊಬ್ಬ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾನೆ. ಆತ ಮೃತನಾದ ಮೇಲೆ ಕುಟುಂಬ ಗೋಳಾಡುತ್ತಿದೆ. ಅಲ್ಲೇ ಬಾರ್ ಮುಂದೆ ಲಾಂಗ್ ಹಿಡಿದು ರೌಡಿಶೀಟರ್ ದಾರಿ ಹೋಕರಿಗೆ ಬೆದರಿಕೆ ಹಾಕುತ್ತಿದ್ದಾನೆ. ಈ ಘಟನೆ ನಡೆದಿರೋದು ಕೋಲಾರ ಜಿಲ್ಲೆ ಕೆಜಿಎಫ್ ನಗರದಲ್ಲಿ.
ಕಳೆದೆರಡು ದಿನಗಳ ಹಿಂದಷ್ಟೇ ಯುವಕನೋರ್ವನನ್ನ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವ ಮೂಲಕ ಕೆಜಿಎಫ್ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ರೌಡಿ ಶೀಟರ್ ಕೈನಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಗರದ ಜನತೆ ಆತಂಕಕ್ಕೀಡಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕೆಜಿಎಫ್ನಲ್ಲಿ ರೌಡಿಶೀಟರ್‌ನೋರ್ವ ಸಿನಿಮಾ ಸ್ಟೈಲ್‌ನಲ್ಲಿ ಲಾಂಗ್ ಹಿಡಿದು ಮದ್ಯದಂಗಡಿಯಲ್ಲಿ ಬೀರ್ ವಸೂಲಿ ಮಾಡಿರುವುದು ಹಾಗೂ ದಾರಿಹೋಕರಿಗೆ ಸಿನಿಮಾ ಸ್ಟೈಲ್ನಲ್ಲಿಯೇ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಕೆಜಿಎಫ್ ನಗರದ ಸಲ್ಡಾನಾ ಸರ್ಕಲ್ನ ಆರ್‌ಎಂ ಬಾರ್ ಮುಂದೆ ರೌಡಿಶೀಟರ್ ಎಡ್ವಿನ್ ಎಂಬಾತ ಲಾಂಗ್ ಹಿಡಿದು ಮದ್ಯದಂಗಡಿಯಲ್ಲಿ ಬೀರ್ಗೆ ಡಿಮ್ಯಾಂಡ್ ಮಾಡಿ, ಅಂಗಡಿಯವನಿಂದ ಎರಡು ಬೀರ್ ಬಾಟಲ್ ವಸೂಲಿ ಮಾಡಿದ್ದಾನೆ. ಜೊತೆಗೆ ದಾರಿಹೋಕರಿಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ. ಕೆಜಿಎಫ್ನ ಈ ಪುಡಿ ರೌಡಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್‌ಎಂ ವೈನ್ಸ್ ಮುಂದೆ ಕುಡಿದು ರಂಪಾಟ ಮಾಡಿದ್ದ ರೌಡಿಶೀಟರ್ ಎಡ್ವಿನ್ ಎಂಬಾತನನ್ನ ರಾಬರ್ಟ್ ಸನ್ ಠಾಣೆ ಪೊಲೀಸರು ಬಂಧಿಸಿ, ತಮ್ಮದೇ ಸ್ಟೈಲ್‌ನಲ್ಲಿ ಪಾಠ ಕಲಿಸಿದ್ದಾರೆ. ಅಲ್ಲದೆ ಕಳೆದೆರಡು ದಿನಗಳ ಹಿಂದೆ ನಗರದಲ್ಲಿ ಹರಿದ ರಕ್ತದ ಕಲೆಗಳಿಂದ ಚೇತರಿಕೆ ಕಂಡುಕೊಳ್ಳುವ ಮುನ್ನವೇ, ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಸ್ಥಳೀಯರನ್ನ ಆತಂಕಕ್ಕೀಡು ಮಾಡಿದೆ. ಅಲ್ಲದೆ ಮೀಸೆ ಬಾರದ ಪುಡಿ ರೌಡಿಗಳು ನಗರದಲ್ಲಿ ದಾಂಧಲೆ ಮಾಡುತ್ತಿರುವ ಹಿನ್ನೆಲೆ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಡಿ ರೌಡಿಗಳ ಅಟ್ಟಹಾಸವನ್ನ ಮಟ್ಟ ಹಾಕದಿದ್ದರೆ ಒಂದು ಕಾಲಕ್ಕೆ ಅಂಡರ್ ವರ್ಲ್ಡ್ನಲ್ಲಿ ಹೆಸರು ಮಾಡಿದ್ದ ಕೆಜಿಎಫ್, ಮತ್ತೊಮ್ಮೆ ಪಾತಕಲೋಕದ ಪುಟಗಳನ್ನು ತೆರೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.