ಚಿಂತಾಮಣಿ : ದಿನೇದಿನೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಕಂಡು ಭಯಭೀತರಾದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಆದರೆ, ಆಸ್ಪತ್ರೆಯಲ್ಲಿ ಒಂದೇ ಒಂದು ಟೆಸ್ಟ್ ಮಾಡುವ ಕೇಂದ್ರ ಇರುವುದರಿಂದ ಟೆಸ್ಟ್ ಬೇಗನೆ ಆಗದೆ ಸಾರ್ವಜನಿಕರು ಪರದಾಡುವಂತಾಗಿದೆ.
ಪ್ರತಿದಿನ ನೂರಾರು ಜನ ಟೆಸ್ಟ್ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಆದರೆ, ಸಿಬ್ಬಂದಿ ಕೊರತೆ ಇರುವುದರಿಂದ ಟೆಸ್ಟ್ ಮಾಡುವವರು ಮಧ್ಯಾಹ್ನದವರೆಗೆ ಟೆಸ್ಟ್ ಮಾಡಿ ನಂತರ ಟೆಸ್ಟಿಂಗ್ ನಿಲ್ಲಿಸುತ್ತಿದ್ದಾರೆ.
ಇದರಿಂದ ಗ್ರಾಮೀಣ ಭಾಗದಿಂದ ಬಂದು ಇಡೀ ದಿನ ಕಾದು ಕುಳಿತ ಸಾರ್ವಜನಿಕರು ಟೆಸ್ಟ್ ಮಾಡಿಸಿಕೊಳ್ಳಲಾಗದೇ ಸಮಸ್ಯೆ ಎದುರಿಸುವಂತಾಗಿದೆ.
ಹಗಲೆಲ್ಲ ಕ್ಯೂನಲ್ಲಿ ನಿಂತು ಕಾಯುತ್ತಿರುವವರನ್ನು ಬಿಟ್ಟು ಗಣ್ಯರು, ಜನಪ್ರತಿನಿಧಿಗಳ ಶಿಫಾರಸಿನಿಂದ ಬಂದವರಿಗೆ ಕೂಡಲೇ ಟೆಸ್ಟ್ ಮಾಡುತ್ತಾರೆ. ಆದರೆ, ಕ್ಯೂನಲ್ಲಿ ಇರುವರನ್ನು ಕಡೆಗಣಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಾರೆಂದು ಸಾರ್ವಜನಿಕರು ದೂರಿದ್ದಾರೆ.
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಲ್ಯಾಬ್ ಟೆಕ್ನಿಷಿಯನ್ ಆದ ನಾವು ಕೊರೊನಾ ಟೆಸ್ಟ್ ಮಾಡುತ್ತಿದ್ದೇವೆ. ಲ್ಯಾಬ್ನಲ್ಲೂ ನೋಡಿಕೊಳ್ಳಬೇಕು, ಇಲ್ಲಿ ಟೆಸ್ಟ್ ಕೂಡ ಮಾಡಬೇಕು ಅಂದರೆ ಕಷ್ಟವಾಗುತ್ತದೆ.ಹೀಗಾಗಿ, ಮಧ್ಯಾಹ್ನದ ಮೇಲೆ ಅನಿವಾರ್ಯವಾಗಿ ಟೆಸ್ಟ್ ನಿಲ್ಲಿಸುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಟೆಸ್ಟ್ ಸಿಬ್ಬಂದಿಯೊಬ್ಬರು ತಿಳಿಸಿದರು.