ಕೋಲಾರ: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ನಂದಿನಿ ಮತ್ತು ಗಿರೀಶ್ ಮೃತ ದಂಪತಿ. ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ಸೆ.16ರಂದು ಬೆಂಕಿ ಅವಘಡ ಸಂಭವಿಸಿತ್ತು.
ಮುಳಬಾಗಿಲು ತಾಲೂಕಿನ ಕುಪ್ಪಡಹಳ್ಳಿ ಗ್ರಾಮದ ದಂಪತಿ ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತ ತೋಟದ ಮನೆಯಲ್ಲೇ ವಾಸವಿದ್ದರು. ಸೆ.16ರಂದು ಕಾಫಿ ಮಾಡುವಾಗ ಸಿಲಿಂಡರ್ ಸೋರಿಕೆಯಾಗುತ್ತಿರುವುದು ಕಂಡು ಬಂದಿದೆ. ನಂತರ ನಂದಿನಿ ತನ್ನ ಪತಿ ಗಿರೀಶ್ಗೆ ಈ ಕುರಿತು ತಿಳಿಸಿದ್ದಳು. ಗಿರೀಶ್ ರಿಪೇರಿ ಮಾಡಿ ನಂತರ ಸ್ಟವ್ ಹಚ್ಚಿ ನಂತರ ಏಕಾಏಕಿ ಬೆಂಕಿ ಅವಘಡ ಸಂಭವಿಸಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿ ಚಿಕತ್ಸೆ ಫಲಕಾರಿಯಾಗದೆ ದಂಪತಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿ ಸಾವಿನಿಂದಾಗಿ ಪುಟ್ಟ ಮಗುವೊಂದು ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಯುವತಿ ಆತ್ಮಹತ್ಯೆಗೆ ಶರಣು: ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದಲ್ಲಿ ನಡೆದಿದೆ. ಚಿನ್ನಕೋಟೆ ಗ್ರಾಮದ ಕೀರ್ತನ(18) ಆತ್ಮಹತ್ಯೆಗೆ ಶರಣಾದ ಯುವತಿ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಯುವತಿಗೆ ಡಾನ್ಸ್ ಕಲಿಯಲು ಹೆಚ್ಚು ಆಸಕ್ತಿ ಇತ್ತು ಎಂದು ತಿಳಿದುಬಂದಿದೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ನಡುವೆ ಗಲಾಟೆ
ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ: ಮತ್ತೊಂದೆಡೆ, ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಸಂಜೆ ನಡೆದಿದೆ. ವಿಜಯಲಕ್ಷ್ಮೀ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತಿದ್ದ ವಿಜಯಲಕ್ಷ್ಮಿ, ಪೋಷಕರ ವಿಚ್ಛೇದನದ ಬಳಿಕ ತನ್ನ ತಾಯಿಯೊಂದಿಗೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಜ್ಞಾನಜ್ಯೋತಿ ನಗರದಲ್ಲಿ ವಾಸವಿದ್ದಳು.
ಕಳೆದ ಒಂದು ವಾರದಿಂದ ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಸೆ.19ರಂದು ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೋಗಿದ್ದವಳು ವಾಪಸ್ ಆಗಿರಲಿಲ್ಲ. ಈ ಬಗ್ಗೆ ತಾಯಿ ಜ್ಞಾನಭಾರತಿ ಠಾಣೆಗೆ ದೂರು ನೀಡಲು ಹೋದಾಗ ಮಗಳ ಸಾವಿನ ಸುದ್ದಿ ಗೊತ್ತಾಗಿತ್ತು.