ಕೋಲಾರ: ಈ ಜಿಲ್ಲೆಯಲ್ಲಿ ನೂರಾರು ಜನರಿಗೆ ಕೊರೊನಾ ಸೋಂಕು ಹರಡಿದೆಯಾದರೂ ಸೋಂಕಿನ ಗುಣಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಕೊರೊನಾ ಮುಕ್ತವಾಗಿದ್ದ ಗಡಿ ಜಿಲ್ಲೆ ಕೋಲಾರದಲ್ಲಿ 3 ಜನ ಸಾವನ್ನಪ್ಪಿದ್ರೆ, 3 ಜನ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಕೊರೊನಾಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದ್ದರೂ ಕೂಡ ಕೋಲಾರ ಜಿಲ್ಲೆಯಲ್ಲಿ 50 ದಿನಗಳವರೆಗೂ ಸೋಂಕು ಕಾಣಿಸಿಕೊಂಡಿರಲಿಲ್ಲ. ಎಲ್ಲೆಡೆ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದರೂ ಆಂಧ್ರ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಕೋಲಾರಕ್ಕೆ ಕೊರೊನಾ ಕರಿನೆರಳು ಬಿದ್ದಿರಲಿಲ್ಲ.
ಕೋಲಾರದಲ್ಲಿ ಮೇ. 7ರವರೆಗೆ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ. ನಂತರ ಸಾಲು ಸಾಲಾಗಿ ಕೊರೊನಾ ಕೇಸುಗಳು ಆರಂಭವಾಗುವ ಮೂಲಕ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ದೆಹಲಿಯಿಂದ ಬಂದಿದ್ದ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ 48 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಜೂ. 26ರಂದು ಮೃತಪಟ್ಟಿದ್ದಾರೆ. ಅದೇ ರೀತಿ ಬೆಂಗಳೂರು ಮೂಲದ ಶ್ರೀನಿವಾಸಪುರದ 44 ವರ್ಷದ ಕಟ್ಟಡ ಕಾರ್ಮಿಕ ಮತ್ತು ಕೋಲಾರದ 62 ವರ್ಷದ ದರ್ಗಾ ಮೊಹಲ್ಲಾದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಹಾಗಾಗಿ ಕೋಲಾರ ಜಿಲ್ಲೆಯ ಜನರಲ್ಲಿ ಅತಂಕ ಹೆಚ್ಚಾಗಿದೆ.
ಕೋಲಾರ ಜಿಲ್ಲೆಯಲ್ಲಿ ಇದುವರೆಗೂ 122 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 52 ಮಂದಿ ಗುಣಮುಖರಾಗಿದ್ದಾರೆ. 65 ಪ್ರಕರಣಗಳು ಸಕ್ರಿಯವಾಗಿದೆ. ಕಳೆದ ಒಂದು ವಾರದಿಂದ ಕೊರೊನಾ ನಾಗಾಲೋಟ ಜಿಲ್ಲೆಯಲ್ಲಿ ಮುಂದುವರೆದಿದ್ದು, ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಜೊತೆಗೆ ನಾಲ್ಕು ದಿನಗಳಲ್ಲಿ ಮೂರು ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಮೊನ್ನೆ ಒಂದೇ ದಿನ ಇಬ್ಬರು ಮೃತಪಟ್ಟಿರುವುದು ಜಿಲ್ಲಾಡಳಿತಕ್ಕೆ ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಮಾತ್ರವಲ್ಲದೆ 3ಕ್ಕೂ ಹೆಚ್ಚು ಪ್ರಕರಣಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತಷ್ಟು ಮಂದಿ ಕೊರೊನಾಗೆ ಬಲಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಈಗಾಗಲೇ ಸಾರಿ ಹಾಗೂ ಐಎಲ್‌ಐ ಪ್ರಕರಣಗಳು ಸಹ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಕೂಡ ಎಲ್ಲರ ರಕ್ಷಣೆಗೆ ಬದ್ಧವಾಗಿದೆ ಅನ್ನೋದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾತು.