ಕೋಲಾರ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯ ಟೊಮ್ಯಾಟೊ ಮಂಡಿ ಮಾಲೀಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತನ ಟ್ರಾವೆಲ್ ಹಿಸ್ಟರಿ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ಕೋಲಾರ ಎಪಿಎಂಸಿ ಏಷ್ಯಾದ ಅತಿ ದೊಡ್ಡ 2ನೇ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿದೆ. ಕೊರೊನಾ ನಡುವೆ ಎಪಿಎಂಸಿ ತನ್ನ ವಹಿವಾಟು ನಿಲ್ಲಿಸಿರಲಿಲ್ಲ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ವಹಿವಾಟು ಸಾಗುತ್ತಿತ್ತು. ಹೀಗಿದ್ದರೂ ಮಾರುಕಟ್ಟೆ ಮೇಲೆ ಕೊರೊನಾ ಸೋಂಕು ದಾಳಿ ಮಾಡಿದೆ. ಹೊರ ರಾಜ್ಯಗಳಿಗೆ ಹೋಗುವ ಚಾಲಕರಿಂದ ಜಿಲ್ಲೆಗೆ ಕೊರೊನಾ ಪ್ರವೇಶಿಸಿದೆ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 19 ಜನ ಸೋಂಕಿತರ ಪೈಕಿ 9 ಜನ ಹೊರರಾಜ್ಯಗಳಿಗೆ ಹೋಗಿ ಬಂದಿದ್ದ ಡ್ರೈವರ್ ಮತ್ತು ಕ್ಲೀನರ್‌ಗಳು ಇದ್ದಾರೆ. ಇದರ ಮಧ್ಯೆ ಮತ್ತೊಂದು ಆತಂಕಕಾರಿ ಅಂಶ ಪತ್ತೆಯಾಗಿದೆ. ಕೋಲಾರ ಎಪಿಎಂಸಿಯ ಸಿಎಂಆರ್ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಕೋವಿಡ್ ಪತ್ತೆಯಾಗಿದೆ.
ಹಾವೇರಿ ಮೂಲದ ಸಿಎಂಆರ್ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ 46 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದೆ. ಈತ ಮೇ 18ರಂದು ಹಾವೇರಿ ಹಾಗೂ ದಾವಣಗೆರೆಗೆ ಹೋಗಿ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಈತ ಸಲೂನ್ ಅಂಗಡಿ, ಬ್ಯಾಂಕ್‌ಗೆ ಭೇಟಿ ನೀಡಿದ್ದ ಎನ್ನಲಾಗುತ್ತಿದೆ. ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸುಮಾರು 50ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸೋಂಕಿತ ವ್ಯಕ್ತಿ ವಾಸವಿದ್ದ ನಗರದ ಹಾರೋಹಳ್ಳಿ ಬಡಾವಣೆ ಸೀಲ್ ಮಾಡಿ ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಿದರು. ಆದರೆ, ಆತ ಕೆಲಸ ಮಾಡಿದ್ದ ಸಿಎಂಆರ್ ಮಂಡಿಯನ್ನು ಸೀಲ್ ಮಾಡಲಿಲ್ಲ. ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸಿಎಂಆರ್ ಮಂಡಿ ಮಾಲೀಕರನ್ನು ಕ್ವಾರಂಟೈನ್ ಮಾಡದೆ ಬಿಟ್ಟ ಕಾರಣ ಅವರು ಇಂದು ಮಾರುಕಟ್ಟೆಯ ವಹಿವಾಟಿನಲ್ಲಿ ಭಾಗವಹಿಸಿದರು. ಜಿಲ್ಲಾಡಳಿತ ಸಿಎಂಆರ್ ಮಂಡಿಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲು ಆದೇಶ ಹೊರಡಿಸಿತ್ತು. ಮಂಡಿ ಮಾಲೀಕರನ್ನು ಕ್ವಾರಂಟೈನ್ ಮಾಡಲು ಸೂಚನೆ ನೀಡಿದೆ. ಅವರು ಕ್ವಾರಂಟೈನ್ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಿತ್ತು.
ಮಾರುಕಟ್ಟೆ ಮ್ಯಾನೇಜರ್ನಿಂದ ನೂರಾರು ಜನರಿಗೆ ಸೋಂಕು ಹರಡಿದೆಯಾ ಎಂಬ ಭಯ ಸ್ಥಳೀಯರಲ್ಲಿ ಶುರುವಾಗಿದೆ.