ಕೋಲಾರ: ಪಕ್ಷದಲ್ಲಿರುವ ಗೊಂದಲಗಳನ್ನ ಮರೆಮಾಚುವ ಸಲುವಾಗಿ ಕೇಂದ್ರ ಸರ್ಕಾರದ ಬಜೆಟ್ನತ್ತ ಕಾಂಗ್ರೆಸ್ ಬೆರಳು ಮಾಡಿ ತೋರಿಸುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಕಾಂಗ್ರೆಸ್ನಲ್ಲಿ ಸಾಕಷ್ಟು ಗೊಂದಲಗಳಿವೆ. ಆ ಗೊಂದಲಗಳನ್ನ ಮರೆಮಾಚುವ ಸಲುವಾಗಿ ಬಜೆಟ್ನತ್ತ ಬೆರಳು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೆ ಮುಖ್ಯಮಂತ್ರಿಯಾಗುವುದಕ್ಕೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರ ನಡುವೆ ಗೊಂದಲಗಳಿದ್ದು, ಅವರಲ್ಲೇ ಕಿತ್ತಾಟ ನಡೆಯುತ್ತಿದೆ. ವಿರೋಧ ಪಕ್ಷದವರಿಗೆ ಬೇರೆ ಕೆಲಸವಿಲ್ಲ. ಅದಕ್ಕೆ ಟೀಕೆ ಟಿಪ್ಪಣಿಗಳನ್ನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿ ಒಳ ಜಗಳಗಳು ಹೆಚ್ಚಾಗಿವೆ. ಮುಂದಿನ ಚುನಾವಣೆಗಳಲ್ಲಿಯೂ ನಾವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ಇನ್ನು ಆರ್ಥಿಕ ಪರಿಸ್ಥಿತಿಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಕೇಂದ್ರ ಬಜೆಟ್ ಅಭಿವೃದ್ಧಿ ಪರವಾಗಿದೆ ಎಂದರು.