ಕೋಲಾರ: ವಿಜಯದಶಮಿ ಅಂಗವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಮಾಲೂರು ಶಾಸಕ ಕೈ.ವೈ. ನಂಜೇಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ವಿಜಯದಶಮಿ ಅಂಗವಾಗಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಸ್ವಗ್ರಾಮವಾದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಬನ್ನಿಮರ ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕರು ನಾಡ ಬಂದೂಕಿನಿಂದ ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೆ ಇದೀಗ ಶಾಸಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಸೆನ್ಸ್ ಪಡೆದವರು ಮಾತ್ರ ನಾಡ ಬಂದೂಕನ್ನ ಉಪಯೋಗಿಸಬೇಕು ಎಂಬ ನಿಯಮವಿದೆ. ಶಾಸಕರು ಈ ನಿಯಮವನ್ನು ಉಲ್ಲಂಘಿಸಿದ್ದು, ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿರುವುದು ಮತ್ತು ಬೇರೆಯವರ ಹೆಸರಿನಲ್ಲಿದ್ದ ಬಂದೂಕನ್ನು ಬಳಸಿರುವ ಆರೋಪದಡಿ ಮಾಸ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ನಂಜೇಗೌಡ ಅವರ ಸಹೋದರ ಈರೇಗೌಡ ಹೆಸರಿನಲ್ಲಿ ಬಂದೂಕು ಪರವಾನಗಿ ಇದೆ. ಶಾಸಕರು ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಬಳಸಿದ ಹಿನ್ನೆಲೆ ನಂಜೇಗೌಡ ಹಾಗೂ ಅವರ ಸಹೋದರನ ವಿರುದ್ಧ ಪ್ರಕರಣ ದಾಖಲಾಗಿದೆ.