ಕೋಲಾರ: ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ನನ್ನ ಜೊತೆ ಬಾಂಬೆಗೆ ಬಂದಂತಹ ಎಲ್ಲ ಸ್ನೇಹಿತರಿಗೂ ಸಚಿವ ಸ್ಥಾನ ಸಿಗಲಿದ್ದು, ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಇದುವರೆಗೂ ಮಾತು ಮೀರಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಲ್ಲರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಉಪಚುನಾವಣೆ ನಂತರ ಮುಖ್ಯಮಂತ್ರಿಗಳು ಕೇಂದ್ರದ ನಾಯಕರ ಜೊತೆ ಮಾತನಾಡಿದ್ದು, ಕೇಂದ್ರದಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಇನ್ನು ನನ್ನ ಖಾತೆಗೆ ಬಗ್ಗೆ ಒಂದು ವಾರದಲ್ಲಿ ನಿರ್ಧಾರವಾಗಲಿದೆ. ಸರ್ಕಾರ ತಮಗೆ ಕೊಟ್ಟಂತಹ ಜವಾಬ್ದಾರಿಯನ್ನು ನಿಭಾಯಿಸಿದ್ದು, ಜನರ ಆಶೀರ್ವಾದ ಇರುವವರೆಗೂ ಕೆಲಸ ಮಾಡುವೆ ಎಂದರು.