ಕೋಲಾರ: ಸರ್ಕಾರದ ಖಜಾನೆ ಖಾಲಿಯಾಗಿದ್ದು, ಮುಖ್ಯಮಂತ್ರಿ ಅವರಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.
ನೌಕರರಿಗೆ ವೇತನ ನೀಡುವುದು ಸೇರಿದಂತೆ ಸರ್ಕಾರಕ್ಕೆ ತುಂಬಾ ಹೊರೆಯಾಗಿದೆ. ಜೊತೆಗೆ ಸರ್ಕಾರದ ಖಜಾನೆ ಖಾಲಿಯಾಗಿರುವ ಕಾರಣ ಮುಖ್ಯಮಂತ್ರಿ ಅವರು ಮದ್ಯದಂಗಡಿಗಳನ್ನ ತೆರೆಯುವುದಕ್ಕೆ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.
ಇನ್ನು, ವಿಶ್ವದಲ್ಲಿಯೇ ಮೋದಿ ನಂಬರ್ ಒನ್, ಇಂದು ಅವರು ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಅವರ ಸೂಚನೆಗಳನ್ನು ತಿಳಿದುಕೊಂಡು ಮದ್ಯದಂಗಡಿಗಳನ್ನು ತೆರೆಯಲಾಗುತ್ತದೆ. ಪಂಜಾಬ್ ರಾಜ್ಯದಲ್ಲಿ ಮದ್ಯ ಮಳಿಗೆ ತೆರೆಯುವುದಕ್ಕೆ ಅಲ್ಲಿನ ಸರ್ಕಾರ ಮನವಿ ಮಾಡಿತ್ತು, ಆದ್ರೆ ಆ ಮನವಿಯನ್ನ ನಿರಾಕರಿಸಿದ್ದಾರೆ ಎಂದರು.
ಸದ್ಯ ಮದ್ಯದಂಗಡಿಗಳಲ್ಲಿ ಸ್ಟಾಕ್ ಪರಿಶೀಲನೆ ಮಾಡಲಾಗುತ್ತಿದ್ದು, ವ್ಯತ್ಯಾಸ ಕಂಡು ಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ರು.