ಕೋಲಾರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಎರಡು ಬಣಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಘಟನೆ ನಡೆದಿದೆ.
ಇಂದು ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಪ್ರಾರಂಭದ ವೇಳೆ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಸಭೆಗೆ ಗೈರು ಹಾಜರಾಗಿದ್ದರು. ಬಳಿಕ ಸಭೆಗೆ ಆಗಮಿಸಿದ ರಮೇಶ್ ಕುಮಾರ್ ಬೆಂಬಲಿಗರು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮುಂಭಾಗದಲ್ಲೇ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಇನ್ನು ಕೆಲ ಕಾರ್ಯಕರ್ತರು, ನಿಮ್ಮ ಜಗಳದಿಂದ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಿಮ್ಮಿಬ್ಬರ ಬಣದಿಂದ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿದಂತೆ ಮೈಕ್ ಕಿತ್ತುಕೊಂಡ ಕೆ.ಎಚ್. ಮುನಿಯಪ್ಪ ಈ ರೀತಿ ಗಲಾಟೆ ಮಾಡುವವರು ಸಿದ್ದರಾಮಯ್ಯ ಕರೆದುಕೊಂಡು ಬಂದು ಗೆಲ್ಲಿಸುತ್ತಾರಾ ಎಂದು ರಮೇಶ್ ಕುಮಾರ್ ಬಣದವರಿಗೆ ಪ್ರಶ್ನೆ ಮಾಡಿದ್ದಾರೆ. ಮುಂದಿನ ಚುನಾವಣೆಗೆ ಎಲ್ಲರೂ ಒಗ್ಗಟಾಗಿ ಕೆಲಸ ಮಾಡೋಣ ಎಂದು ಇದೇ ವೇಳೆ ಕೇಂದ್ರದ ಮಾಜಿ ಸಚಿವರು ಆದ ಕೆ ಎಚ್ ಮುನಿಯಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಗೋಕಾಕ್ ಸಾಹುಕಾರ್ ಸ್ಕೆಚ್?