ಕೋಲಾರ: ಲಾಭದ ಆಸೆಗೆ ಹಣವನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ನೂರಾರು ಮಹಿಳೆಯರು ಹಾಗೂ ವೃದ್ಧರು ನಗರದ ಕೆಜಿಎಫ್ ಎಸ್ಪಿ ಕಚೇರಿ ಎದುರು ದೂರಿನ ಪ್ರತಿ ಮತ್ತು ದಾಖಲೆಗಳನ್ನು ಹಿಡಿದುಕೊಂಡು ನಿಂತಿದ್ದಾರೆ.
ಹೌದು, ನಾವು ಹೇಳ ಹೊರಟಿರೋದು ಐಎಂಎ ಮಾದರಿಯಲ್ಲೇ ಮೋಸ ಮಾಡಿದ್ದಾರೆ ಎನ್ನಲಾದ ಬಂಗಾರಪೇಟೆ ಷಣ್ಮುಗಂ ಫೈನಾನ್ಸ್ ಆ್ಯಂಡ ಚಿಟ್ ಫಂಡ್ ಕಂಪನಿಯ ಸ್ಟೋರಿ. ಯಾವುದೇ ಆಧಾರವಿಲ್ಲದೆ ಬಡ್ಡಿಯ ಆಸೆಗೆ ಲಕ್ಷದಿಂದ ಕೋಟ್ಯಂತರ ರೂ.ಗಳವರೆಗೆ ಹಣವನ್ನ ಹೂಡಿಕೆ ಮಾಡಿ ಇವರೆಲ್ಲಾ ಮೋಸ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಹೂಡಿಕೆ ಮಾಡಿದವರೆಲ್ಲಾ ತಮ್ಮ ನಿವೃತ್ತಿಯ ನಂತರ ಬಂದ ಹಣ, ಇಲ್ಲಾ ಮಕ್ಕಳ ಮದುವೆಗೆಂದು ಕೂಡಿಟ್ಟಿರುವುದು. ಹೀಗೆ ದುಡಿಯಲಾಗದ ಸ್ಥಿತಿಯಲ್ಲೂ ಇದ್ದ ಜಮೀನನ್ನು ಮಾರಿ ಬಂದ ಹಣವನ್ನು ಇಲ್ಲಿ ಹೂಡಿಕೆ ಮಾಡಿದ್ದರಂತೆ. ಈ ಮೂಲಕ ಬರುವ ಬಡ್ಡಿಹಣದಲ್ಲಿ ಜೀವನ ಮಾಡಲು ಹೋದವರೇ ಇಂದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಇಂಥಹವರೆಲ್ಲಾ ಈಗ ಕಳೆದ ಮೂರು ವರ್ಷಗಳಿಂದ ತಾವು ಕೊಟ್ಟ ಹಣವೂ ಇಲ್ಲದೆ, ಅದಕ್ಕೆ ಬಡ್ಡಿಯೂ ಇಲ್ಲದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟು ಪೊಲೀಸ್ ಠಾಣೆಗಳಿಗೆ ಅಲೆದರೂ ಪ್ರಯೋಜನವಾಗದೆ ಗುರುವಾರ ಎಸ್ಪಿ ಕಚೇರಿ ಬಳಿ ತಮ್ಮ ಅಳಲು ತೋಡಿಕೊಂಡರು.
ಷಣ್ಮುಗಂ ಫೈನಾನ್ಸ್ನಿಂದ ನೂರಾರು ಕೋಟಿ ವಂಚನೆಯಾಗಿದೆ ಎಂದು ಹೇಳಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸುಮ್ಮನಿದ್ದ ಮೋಸ ಹೋದವರು, ಒಬ್ಬೊಬ್ಬರಾಗಿಯೇ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇನ್ನು ಅದೆಷ್ಟು ಜನ ಮೋಸ ಹೋಗಿದ್ದಾರೆ, ಎಷ್ಟು ಕೋಟಿ ಹಣ ಮೋಸ ಆಗಿದೆ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.
ಈ ಕುರಿತು ಮಾತನಾಡಿರುವ ಎಸ್ಪಿ ಎಂ.ಎಸ್ ಮೊಹಮ್ಮದ್ ಸುಜೀತ ಅವರು, ಮೋಸ ಹೋದವರು ದೂರುಗಳನ್ನು ಕೊಟ್ಟಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.