ಕೋಲಾರ: ಸಚಿವ ಸಂಪುಟ ವಿಸ್ತರಣೆಯಾಗಲಿ ಅಥವಾ ಪುನಾರಚನೆ ವಿಚಾರವಾಗಲಿ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಇಂದು ಕೋಲಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಪರಿಶೀಲನೆಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಕುರಿತು ಯಾರೂ ಮಾತನಾಡಬಾರದೆಂದು ನಮ್ಮ ನಾಯಕರು ಸೂಚನೆ ನೀಡಿದ್ದು, ಸಿಎಂ ಹಾಗೂ ಹೈಕಮಾಂಡ್ ಈ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ಗಾದಿಗೆ ಸಂಬಂಧಿಸಿದಂತೆ, ನಾನು ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡುವುದಿಲ್ಲ. ಕಾಂಗ್ರೆಸ್ ನನ್ನ ಮಾತೃ ಪಕ್ಷವೇ ಆಗಿರಬಹುದು. ಆದ್ರೆ ಆ ಪಕ್ಷದಿಂದ ನಾನು ಹೊರ ಬಂದಿದ್ದೇನೆ. ಹೀಗಾಗಿ ಇನ್ನೊಂದು ಪಕ್ಷದ ಕುರಿತು ಮಾತನಾಡುವುದಿಲ್ಲ ಎಂದರು. ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಹೊರ ಬಂದು ನನ್ನ ಕ್ಷೇತ್ರದಲ್ಲಿ ಸುಮಾರು 53 ಸಾವಿರ ಮತಗಳ ಅಂತರದಿಂದ ಬಿಜೆಪಿಯಿಂದ ಗೆದ್ದಿದ್ದೇನೆ. ಇದೀಗ ಸರ್ಕಾರ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿಯನ್ನ ಕಾಯಾ, ವಾಚ, ಮನಸ್ಸಿನಿಂದ ಮಾಡುತ್ತಿದ್ದೇನೆ ಎಂದರು.
ಇದೇ ವೇಳೆ ಕೋಲಾರದ ಟಮಕ ಬಳಿ ಇರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳನ್ನೊಳಗೊಂಡಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು. ಇನ್ನು ಸಭೆಯಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ರು.