ಕೋಲಾರ : ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಸಂಘಟನೆ ದೇಶ ವಿರೋಧಿ ಕೆಲಸ ಮಾಡಿದಾಗ ಕಾನೂನು ಅದರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಹಾಗೆಯೇ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಬಿಜೆಪಿ ನಾಯಕಿ ತಾರಾ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಅವರಿಗೊಂದು ಕಾನೂನು, ಇವರಿಗೊಂದು ಕಾನೂನು ಎಂಬಂತೆ ಬಿಜೆಪಿ ಮಾಡಿಲ್ಲ. ದೇಶ ವಿರೋಧಿ ಚಟುವಟಿಕೆಗಳನ್ನು ಯಾರು ಮಾಡುತ್ತಾರೋ ಅವರ ವಿರುದ್ದ ನಮ್ಮ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ಹೆಚ್ಚು ಯೋಜನೆಗಳನ್ನು ನೀಡಿದೆ : ಇನ್ನು ನ್ಯಾಯಾಲಯ ಸರಿ ತಪ್ಪನ್ನು ತೀರ್ಮಾನ ಮಾಡಲಿದೆ. ಇದರಲ್ಲಿ ಯಾರನ್ನೂ ದೂಷಿಸುವ ಮಾತಿಲ್ಲ. ಜಾತಿ ಆಧಾರದ ಮೇಲೆ ಶಿಕ್ಷೆ ಆಗಿಲ್ಲ ಬದಲಾಗಿ ಅಪರಾಧದ ಆಧಾರದ ಮೇಲೆ ಶಿಕ್ಷೆಯಾಗಿದೆ ಎಂದು ಹೇಳಿದರು. ಇನ್ನು ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ಹೆಚ್ಚಿನ ಯೋಜನೆಗಳನ್ನು ನೀಡಿದೆ. ಜೊತೆಗೆ ಕಡೆಗಣಿಸಲ್ಪಟ್ಟ ಸಮುದಾಯಗಳಿಗೆ ಮೋದಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಮಾತನಾಡಿದ ಬಿಜೆಪಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಅವಶ್ಯಕತೆ ಇರುವುದರಿಂದಲೇ ಪಿಎಫ್ ಐ ನಿಷೇಧ ಮಾಡಲಾಗಿದೆ. ಬಹಳ ವರ್ಷಗಳಿಂದ ನಮ್ಮ ಸರ್ಕಾರ ಈ ಬಗ್ಗೆ ಹೇಳುತಿತ್ತು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಪಿ.ಎಫ್.ಐ ತಮ್ಮ ಸಂಘಟನೆಯನ್ನು ವಿಸ್ತರಿಸಿರುವುದು ಬಿಟ್ಟರೆ, ಅವರಿಗೆ ದೇಶದ ಬಗ್ಗೆ ಚಿಂತನೆ ಇಲ್ಲ. ದೇಶದ ವಿರೋಧಿ ಚಟುವಟಿಕೆ ನಡೆಸುವ ಯಾವುದೇ ಸಂಘಟನೆಗಳ ವಿರುದ್ದ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಯಾವುದೇ ಧರ್ಮವನ್ನು ಜಾತಿಯನ್ನು ಗುರಿಯಾಗಿಸುವ ಉದ್ದೇಶ ಇಲ್ಲ : ಇನ್ನು ಬಿಜೆಪಿ ಯಾವುದೇ ಒಂದು ಧರ್ಮ ಹಾಗೂ ಜಾತಿಯನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ಅಂತಹ ಮನಸ್ಥಿತಿಯನ್ನು ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ತುಂಬುತ್ತಿದೆ. ನಮ್ಮ ಸರ್ಕಾರ ಅವರಿಗೂ ಸಾಕಷ್ಟು ಯೋಜನೆಗಳನ್ನು ನೀಡಿದೆ. ಹೀಗಾಗಿ ಬಿಜೆಪಿಯವರು ಒಂದು ಧರ್ಮದ ವಿರುದ್ದ ಎನ್ನುವುದು ಅರೋಪ ಅಷ್ಟೇ. ಇನ್ನು ದೇಶದ ರಕ್ಷಣೆ ಕುರಿತಾದ ಬದ್ದತೆಯಿಂದ ಬಿಜೆಪಿ ಕೆಲಸ ಮಾಡುತ್ತಿದೆ. ಹಲವು ಗಲಭೆಗಳಾದಾಗ ಕ್ರಮ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ : ಪಿಎಫ್ಐ ನಿಷೇಧ ಕೇಂದ್ರದ ಐತಿಹಾಸಿಕ ನಿಲುವು: ಸಂಸದ ಬಿ.ವೈ.ರಾಘವೇಂದ್ರ