ಕೋಲಾರ: ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ಡಾ. ವೇಣುಗೋಪಾಲ್ ಹಾಗೂ ಬಾಲಕನ ಸಂಬಂಧಿಕರ ಮಧ್ಯೆ ಚಿಕಿತ್ಸೆ ವಿಚಾರಕ್ಕೆ ವಾಗ್ವಾದ ನಡೆಯಿತು.
ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯ ಡಾ. ವೇಣುಗೋಪಾಲ್ ಬಳಿ ಶಿವಕುಮಾರ್ ಎಂಬುವರು ತಮ್ಮ ಮಗನ ಕಿವಿಯಲ್ಲಿ ಅಚಾನಕ್ಕಾಗಿ ಕಲ್ಲು ಸೇರಿಕೊಂಡಿದೆ ಎಂದು ಚಿಕಿತ್ಸೆಗೆ ಬಂದಿದ್ದಾರೆ. ಈ ವೇಳೆ ಕಲ್ಲು ಹೊರತೆಗೆಯಿರಿ ಎಂದು ವೈದ್ಯರ ಬಳಿ ಮನವಿ ಮಾಡಿದಾಗ ಚಿಕಿತ್ಸೆ ನೀಡದೆ ಸತಾಯಿಸಿದ್ದಾರೆ ಎಂದು ಬಾಲಕನ ಸಂಬಂಧಿಕರು ಆರೋಪಿಸಿದ್ದಾರೆ.
ಬಾಲಕನ ಮೇಲೆ ಕಾಳಜಿಯಿಂದ ವೈದ್ಯರನ್ನ ಏರು ದನಿಯಲ್ಲಿ ಚಿಕಿತ್ಸೆ ನೀಡಿ ಎಂದು ಪೋಷಕರು ಕೇಳಿದಾಗ ಕೋಪಗೊಂಡ ಡಾ. ವೇಣುಗೋಪಾಲ್, ಇದೇನು ಎಮರ್ಜೆನ್ಸಿ ಕೇಸ್ ಅಲ್ಲ, ಬಾಲಕ ಚೆನ್ನಾಗಿಯೇ ಇದ್ದಾನೆ, ಎಮರ್ಜೆನ್ಸಿ ಆದರೆ ನೋಡುತ್ತಿದ್ದೆ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಪೋಷಕರು, ವೈದ್ಯರ ವರ್ತನೆಯ ದೃಶ್ಯವನ್ನ ವಿಡಿಯೋ ಮಾಡುತ್ತಿದ್ದಂತೆ, ವಿಡಿಯೋ ಮಾಡಿಕೊಳ್ಳೋದಾದ್ರೆ ಮಾಡಿಕೊಳ್ಳಿ. ಚಿಕಿತ್ಸೆ ಬೇಕೆಂದರೆ ಕಾಯಬೇಕು, ಇಲ್ಲವಾದರೆ ಸರ್ಕಾರಿ ಆಸ್ಪತ್ರೆಗೆ ಹೋಗು ಎಂದು ಕೋಪದಿಂದ ಹೇಳಿದ್ದಾರೆ ಎನ್ನಲಾಗ್ತಿದೆ.
ಬಾಲಕನ ಕೇಸ್ ನನಗೇನು ಎಮರ್ಜೆನ್ಸಿ ಅಲ್ಲವೆಂದು ಹೇಳಿದ್ದಕ್ಕೆ ಬಾಲಕನ ಪೋಷಕರು ಮತ್ತು ವೈದ್ಯರ ಮಧ್ಯೆ ವಾಗ್ವಾದ ಉಂಟಾಗಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಶ್ರೀನಿವಾಸಪುರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪೋಷಕರು ಗಲಾಟೆ ಮಾಡಿದ ನಂತರ ಬಾಲಕನ ಕಿವಿಯೊಳಗೆ ಹೋಗಿದ್ದ ಕಲ್ಲನ್ನ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.