ಕೋಲಾರ : ಗ್ರಾಮದ ಮಧ್ಯೆ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಸಮುದಾಯಗಳ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಘಟನೆ ತಾಲೂಕಿನ ಮೈಲಾಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೈಲಾಂಡಹಳ್ಳಿ ಗ್ರಾಮದಲ್ಲಿ ನಿನ್ನೆ ವಿರೋಧದ ನಡುವೆಯೂ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮದ ಇತರೆ ಸಮುದಾಯದವರು, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಗುರುತಿಸಿದ್ದ ಜಾಗದಲ್ಲಿಯೇ, ಪ್ರತಿಯೊಂದು ಸಮುದಾಯದ ಮಹಾನ್ ನಾಯಕರ ಪುತ್ಥಳಿಗಳನ್ನ ನಿರ್ಮಾಣ ಮಾಡಬೇಕೆಂದು, ಕಳೆದ ರಾತ್ರಿ ಜೆಸಿಬಿ ಮೂಲಕ ಗ್ರಾಮದ ಶಾಲೆಯ ಎದುರು 5 ಗುಂಡಿಗಳನ್ನು ಅಗೆದಿದ್ದಾರೆ.
ಅಂಬೇಡ್ಕರ್ ಪುತ್ಥಳಿಯೊಂದಿಗೆ ಕೆಂಪೇಗೌಡ, ಬಸವಣ್ಣ, ವಾಲ್ಮೀಕಿ, ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪುತ್ಥಳಿ ನಿರ್ಮಾಣದ ಪೈಪೋಟಿಯಿಂದಾಗಿ ಗ್ರಾಮದಲ್ಲಿ ಸಮುದಾಯಗಳ ಮಧ್ಯೆ ಬಿರುಕು ಉಂಟಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆ ಗ್ರಾಮದಲ್ಲಿ ಓರ್ವ ಡಿವೈಎಸ್ಪಿ, ಮೂವರು ಸರ್ಕಲ್ ಇನ್ಸ್‌ಪೆಕ್ಟರ್, ಇಬ್ಬರು ಸಬ್ ಇನ್ಸ್‌ಪೆಕ್ಟರ್ ಹಾಗೂ ಎರಡು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.